'ಅಮೀರ್ ಕೆ ಸಾಥ್, ಗರೀಬೋಂಕಾ ವಿನಾಶ್' ಎನ್ನುವುದಕ್ಕೆ ಬಜೆಟ್ ಸಾಕ್ಷಿ ಎಂದ ಸಿದ್ದರಾಮಯ್ಯ
ಬೆಂಗಳೂರು: ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರ ಏಕೈಕ ಗುರಿ ‘ಅಮೀರ್ ಕೆ ಸಾಥ್, ಗರೀಬೋಂಕಾ ವಿನಾಶ್’ ಎನ್ನುವುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2022-23ನೇ ಸಾಲಿನ ಬಜೆಟ್ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ನಲ್ಲಿ ಯಾವುದೇ ಮುಜುಗರ-ಅಂಜಿಕೆ ಇಲ್ಲದೆ ಶ್ರೀಮಂತರು ಮತ್ತು ಕ್ರೋನಿ ಬಂಡವಾಳಿಗರ ಕೈ ಹಿಡಿದು, ಬಡವರು, ರೈತರು, ಯುವಜನರನ್ನು ಮಾತ್ರವಲ್ಲ, ತಮ್ಮ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ಮಧ್ಯಮ ವರ್ಗವನ್ನೂ ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ ಎಂದು ಕಿಡಿಗಾರಿದರು.
ರೈತರ ಚಳುವಳಿಯ ಒತ್ತಡಕ್ಕೆ ಮಣಿದು ಕರಾಳ ಕೃಷಿ ಕಾನೂನುಗಳನ್ನು ಕೈಬಿಟ್ಟಿರುವ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಅನುದಾನವನ್ನು ರೂ.1,31,531 ಕೋಟಿಯಿಂದ ರೂ.1,32,513 ಕೋಟಿಗೆ ಹೆಚ್ಚಿಸಿದೆ. ಅಂದರೆ ಕೇವಲ ರೂ.982 ಕೋಟಿ ಹೆಚ್ಚಿಸಿ ರೈತರ ವಿರುದ್ಧ ಸೇಡು ತೀರಿಸಿಕೊಂಡಿದೆ.
''ಬೆಳೆ ವಿಮೆಯ ಅನುದಾನವನ್ನು ರೂ.15,989 ಕೋಟಿಯಿಂದ ರೂ.15,500 ಕೋಟಿಗೆ, ಯೂರಿಯಾ ಸಬ್ಸಿಡಿಯನ್ನು ರೂ.75,930 ಕೋಟಿಯಿಂದ ರೂ.63,222 ಕೋಟಿಗೆ ಮತ್ತು ಬೆಂಬಲ ಬೆಲೆಯ ಅನುದಾನವನ್ನು ರೂ.3596 ಕೋಟಿಯಿಂದ ರೂ.1500 ಕೋಟಿಗೆ ಇಳಿಸಿ ರೈತರ ಬೆನ್ನುಮೂಳೆ ಮುರಿಯಲಾಗಿದೆ. ರೈತರ ಆದಾಯ ದುಪ್ಪಟ್ಟು ಆಗುವುದು ಯಾವಾಗ?'' ಎಂದು ಪ್ರಶ್ನಿಸಿದರು.
‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಆಹಾರ ನಿಗಮಕ್ಕೆ ನೀಡುವ ಸಬ್ಸಿಡಿಯನ್ನು 2,10,929 ಕೋಟಿಯಿಂದ 1,45,920 ಕೋಟಿಗೆ ಮತ್ತು ಗ್ರಾಮೀಣ ನಿರುದ್ಯೋಗಿ ಜನತೆಗೆ ಸಂಜೀವಿನಿಯಂತಿದ್ದ ನರೇಗಾ ಯೋಜನೆಯ ಅನುದಾನವನ್ನು 98,000 ಕೋಟಿಯಿಂದ 73,000 ಕೋಟಿಗೆ ಇಳಿಸಿ ಬಡವರ ಹೊಟ್ಟೆಗೆ ಹೊಡೆಯಲಾಗಿದೆ’ ಎಂದು ಕುಟುಕಿದ್ದಾರೆ.
‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದ @narendramodi ಅವರ ಏಕೈಕ ಗುರಿ ‘ಅಮೀರ್ ಕೆ ಸಾಥ್, ಗರೀಬೋಂಕಾ ವಿನಾಶ್’ ಎನ್ನುವುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2022-23ನೇ ಸಾಲಿನ ಬಜೆಟ್ ಸಾಕ್ಷಿಯಾಗಿದೆ.
— Siddaramaiah (@siddaramaiah) February 1, 2022
1/15#Budget2022