ವೃತ್ತಿ ಶಿಕ್ಷಣ, ವಯಸ್ಕರ ಶಿಕ್ಷಣ ಮತ್ತು ರಾತ್ರಿ ಶಾಲೆ ನಾರಾಯಣ ಗುರುಗಳ ಕ್ರಾಂತಿಕಾರಿ ಚಳವಳಿಗಳು

Update: 2022-02-02 19:30 GMT

ಭಾಗ-6

ಬಾಬು ಶಿವ ಪೂಜಾರಿ ತ್ರಿಭಾಷಾ ಸೂತ್ರ:
ನಾರಾಯಣ ಗುರುಗಳ ಶಿಕ್ಷಣ ಕ್ರಾಂತಿಯ ಹರವು ಬಹುಮುಖವಾದದ್ದು. ತ್ರಿಭಾಷಾ ಸೂತ್ರವಾಗಿದ್ದುದೇ ವಿಶೇಷವಾಗಿತ್ತು, ಮಾತೃಭಾಷೆಯಾದ ಮಲಯಾಳ, ಧಾರ್ಮಿಕ ವಿಧಿ-ವಿಧಾನಗಳನ್ನು ತಿಳಿದುಕೊಳ್ಳಲು ಸಂಸ್ಕೃತ, ಸರಕಾರಿ ಉದ್ಯೋಗ ಪಡೆಯಲು ಹಾಗೂ ಸರಕಾರಿ ವ್ಯವಹಾರಗಳ ತಿಳುವಳಿಕೆಗೆ ಇಂಗ್ಲಿಷನ್ನು ಕಲಿಯಬೇಕೆಂದು ನಿರ್ದೇಶನ ಮಾಡಿದರು. ಆಧುನಿಕ ಪ್ರಜ್ಞೆಗೆ, ಪ್ರಪಂಚದ ಬಹುಭಾಗಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿರುವ ಇಂಗ್ಲಿಷನ್ನು ಪ್ರತಿಯೊಬ್ಬನೂ ಕಲಿಯಬೇಕೆನ್ನುವುದು ಅವರ ಶಿಕ್ಷಣ ಸೂತ್ರದ ನಿಲುವಾಗಿತ್ತು. ಸ್ವಾತಂತ್ರೋತ್ತರ ಭಾರತ ಕೂಡ ಇದೇ ತ್ರಿಭಾಷಾ ಸೂತ್ರವನ್ನು ಅಂಗೀಕರಿಸಿತು. ಆರಂಭದಲ್ಲಿ ಸಂಸ್ಕೃತ ಶಿಕ್ಷಣದ ಬಗೆಗೆ ಒಲವನ್ನು ತೋರಿಸಿದರು. ಮಲೆಯಾಳ ಮತ್ತು ಇಂಗ್ಲಿಷ್ ಶಿಕ್ಷಣದ ಅನಿವಾರ್ಯತೆಗಳನ್ನು ತಿಳಿದ ಗುರುಗಳು ಅದಕ್ಕೆ ಹೆಚ್ಚು ಒತ್ತು ಕೊಟ್ಟರು.

ಕೇರಳದಲ್ಲಿ ಮೊದಲು ಇಂಗ್ಲಿಷ್ ಶಿಕ್ಷಣವನ್ನು ಆರಂಭಿಸಿದ್ದು ಕ್ರೈಸ್ತರ, ದಿ. ಚರ್ಚ್ ಮಿಷನ್ ಸೊಸೈಟಿ. ಇದು 1813 ರಲ್ಲಿ ಕೊಟ್ಟಾಯಂನಲ್ಲಿ ಕಾಲೇಜನ್ನು ಪ್ರಾರಂಭಿಸಿತು. ಕ್ರೈಸ್ತ ಸಾಲ್ವೇಷನ್ ಆರ್ಮಿ ಇಂಗ್ಲಿಷ್ ಶಾಲೆಗಳನ್ನು ಆರಂಭಿಸಿದ ನಂತರ ಸರಕಾರ ಸಾರ್ವಜನಿಕ ಶಾಲೆಗಳನ್ನು ಆರಂಭಿಸಿತು. ತಿರುವನಂತಪುರದಲ್ಲಿ 1834ರಲ್ಲೂ, ಕೊಚ್ಚಿಯಲ್ಲಿ 1837ರಲ್ಲೂ ಸರಕಾರಿ ಶಾಲೆಗಳು ಆರಂಭವಾದುವು. 1865ರಲ್ಲಿ ಎರ್ನಾಕುಲಂನಲ್ಲಿ, 1866ರಲ್ಲಿ ತಿರುವನಂತಪುರದಲ್ಲಿ ಸರಕಾರಿ ಕಾಲೇಜುಗಳು ಆರಂಭವಾದುವು. ಸರಕಾರದ ಈ ಶಾಲೆಗಳಲ್ಲಿ ಕೇವಲ ಸವರ್ಣರ ಮಕ್ಕಳಿಗೆ ಮಾತ್ರ ಪ್ರವೇಶವಿತ್ತು.
ಈಳವರೇ ಮೊದಲಾದ ಅವರ್ಣರ ಮಕ್ಕಳಿಗೆ ಶಾಲೆಗಳಲ್ಲಿ ಸರಕಾರವು ಜಾತಿಗಳ ಅಂತರ ಮತ್ತು ಅಸ್ಪೃಶ್ಯತೆಯ ನೆಲೆಗಳಲ್ಲಿ ಪ್ರವೇಶ ಕೊಡಲಿಲ್ಲ. ನಾಯರ್‌ರು ಅವರ್ಣರ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಪ್ರವೇಶ ಕೊಡಬಾರದೆಂದು ಬ್ರಾಹ್ಮಣರೊಡಗೂಡಿ ಸಂಘಟಿತರಾಗಿ ವಿರೋಧಿಸುತ್ತ ಬಂದರು. ಸರಕಾರವು ಅವರ್ಣರಿಂದ ಶಿಕ್ಷಣ ತೆರಿಗೆಯನ್ನು ಪಡಕೊಂಡು ಅವರ ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶ ಕೊಡದಿದ್ದುದರ ವಿರುದ್ಧ ಸುಮಾರು ಐವತ್ತು ವರ್ಷಗಳ ತನಕ ಆಗಾಗ ಚಳವಳಿಗಳು ನಡೆದವು. ಪರಿಣಾಮವಾಗಿ ತಿರುವಾಂಕೂರಿನ ಅನೇಕ ಕಡೆಗಳಲ್ಲಿ ನಾಯರ್ ಈಳವ ಹಾಗೆಯೇ ನಾಯ-ನಾಡರ್ ಸಮುದಾಯಗಳೊಳಗೆ ಕಲಹಗಳೂ, ಸಂಘರ್ಷಗಳೂ ನಡೆಯುತ್ತಿದ್ದವು.

ವೃತ್ತಿ ಶಿಕ್ಷಣ:
ನಾರಾಯಣ ಗುರುಗಳ ಶಿಕ್ಷಣ ಪ್ರಣಾಳಿಕೆ ಕೇವಲ ಓದು ಬರಹಗಳಿಗಷ್ಟೇ ಸೀಮಿತವಾಗಿರದೆ ವೃತ್ತಿಪರ ಶಿಕ್ಷಣವನ್ನೂ ಒಳಗೊಂಡಿತ್ತು. ಔದ್ಯೋಗಿಕ ಕ್ರಾಂತಿಯ ಮೂಲಕ ಸಾಮಾಜಿಕ ಕ್ರಾಂತಿಯನ್ನು ಸಾಧಿಸಲು, ವೃತ್ತಿಪರ ಶಿಕ್ಷಣವನ್ನು ಆರಂಭಿಸಿದವರಲ್ಲಿ ನಾರಾಯಣ ಗುರುಗಳು ಪ್ರಮುಖರು. ಈಳವರು ಬೇಸಾಯ, ತೋಟಗಾರಿಕೆ, ಮೂರ್ತೆಗಾರಿಕೆ ಮುಂತಾದ ಕಸುಬುಗಳೊಂದಿಗೆ, ತಲೆತಲಾಂತರಗಳಿಂದ ನೇಯ್ಗೆಯನ್ನು ಕುಲ ಕೆಲಸವಾಗಿ ಮಾಡಿಕೊಂಡವರು. ಉದ್ಯೋಗಗಳನ್ನು ವೈಜ್ಞಾನಿಕವಾಗಿ ಬೆಳೆಸಲು ಮತ್ತು ಮೂರ್ತೆಗಾರಿಕೆಗೆ ಬದಲಿ ಉದ್ಯೋಗದ ವ್ಯವಸ್ಥೆಗಾಗಿ ಅರುವಿಪುರದಲ್ಲಿ, ಆನಂತರ ಶಿವಗಿರಿಯಲ್ಲಿ ನೇಯ್ಗೆಯ ಉದ್ಯಮ ಘಟಕವೊಂದನ್ನು ಮತ್ತು ನೇಯ್ಗೆಯ ತರಬೇತಿ ಕೇಂದ್ರ ಒಂದನ್ನು ತೆರೆದರು. ಇದು ಶಿಕ್ಷಣದೊಂದಿಗೆ ವೃತ್ತಿಪರ ಶಿಕ್ಷಣಕ್ಕೆ ಹೊಸ ತಿರುವನ್ನು ಕೊಟ್ಟಿತು. ತೆಂಗಿನ ನಾರಿನ ಕೈಗಾರಿಕೆ, ವೈಜ್ಞಾನಿಕ ಕೃಷಿಗಾರಿಕೆ, ಗುಡಿ ಕೈಗಾರಿಕೆಗಳ ತರಬೇತಿಗಳನ್ನು, ವೃತ್ತಿಪರ ಶಿಕ್ಷಣಗಳನ್ನಾಗಿ ಅಳವಡಿಸಿಕೊಂಡರು. ಇದರಿಂದಾಗಿ ಶಿಕ್ಷಣವು ಬಹುಮುಖವಾದ ಹೊಸ ಆಯಾಮದ ನೆಲೆಗಳನ್ನು ಕಂಡುಕೊಳ್ಳುವಲ್ಲಿ ಸಫಲವಾಯಿತು. ಈ ನೆಲೆಯಿಂದ ಪ್ರಭಾವಿತರಾದ ಅವರ ಗೃಹಸ್ಥ ಅನುಯಾಯಿಗಳಾದ ಕೇಶವನ್ ವೈದ್ಯರ್ ಚಂದ್ರಿಕ ಸಾಬೂನಿನ ಕೈಗಾರಿಕೆಯನ್ನು ಆರಂಭಿಸಿದರು. ಡಾ. ಪಲ್ಪುವಿನ ಕಿರಿಯ ಮಗ ಹರಿಹರ ಜಪಾನಿಗೆ ಹೋಗಿ ಪಿಂಗಾಣಿ ಪಾತ್ರೆಗಳ ತಯಾರಿಕೆಯ ವೃತ್ತಿ ಶಿಕ್ಷಣವನ್ನು ಪಡೆದು ಬಂದು ಬೆಂಗಳೂರಿನಲ್ಲಿ ಪಿಂಗಾಣಿ ಕಾರ್ಖಾನೆಯನ್ನು ಆರಂಭಿಸಿದರು. ಎಸ್‌ಎನ್‌ಡಿಪಿಯ ವಾರ್ಷಿಕದ ವಿಶೇಷ ಸಭೆಗಳಲ್ಲಿ ಔದ್ಯೋಗಿಕ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿತೆಯ ತರಬೇತಿಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಮಾಡಿಸುತ್ತಿದ್ದರು. 1905ರಲ್ಲಿ ಕ್ವಿಲಾನಿನ ಎಸ್‌ಎನ್‌ಡಿಪಿಯ ಅಧಿವೇಶನದಲ್ಲಿ ಪ್ರಥಮ ಮತ್ತು 1906ರಲ್ಲಿಯ ಕಣ್ಣಾನೂರಿನಲ್ಲಿಯ ಅಧಿವೇಶನದಲ್ಲಿ ಎರಡನೇ ಬಾರಿ ಔದ್ಯೋಗಿಕ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಮಾಡಿ ಹೊಸ ಕೈಗಾರಿಕೆಗಳಿಗೆ, ಗ್ರಾಮೋದ್ಯೋಗಗಳಿಗೆ ಪ್ರೋತ್ಸಾಹವನ್ನು ಕೊಟ್ಟರು.

ವಯಸ್ಕರ ಶಿಕ್ಷಣ ಮತ್ತು ರಾತ್ರಿ ಶಾಲೆ:
ಶಿಕ್ಷಣ ಬಹುಮೂಲ್ಯವಾದದ್ದು, ಅದನ್ನು ಕಲಿಯಲು ಪ್ರಾಯದ ಇತಿಮಿತಿ ಇರದು. ಇರಬಾರದು. ಪ್ರತಿಯೊಬ್ಬನಿಗೂ ಅಕ್ಷರ ಜ್ಞಾನವಿರಬೇಕೆನ್ನುವ ಗುರುಗಳು ವಯಸ್ಕರ ಶಾಲೆಯನ್ನು ತೆರೆಯಲು ಆದೇಶ ಮಾಡಿದರು. ಶಿವಗಿರಿಯಲ್ಲಿ ವಯಸ್ಕರ ಶಿಕ್ಷಣವನ್ನು ಆರಂಭಿಸಿದರು. ಪ್ರಾಯಶಃ ದಕ್ಷಿಣ ಭಾರತದಲ್ಲಿ ವಯಸ್ಕರ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟ ಮೊದಲಿಗರು ನಾರಾಯಣ ಗುರುಗಳು. ಹಗಲು ಶಾಲೆಗೆ ಹೋಗಲು ಸಾಧ್ಯವಿಲ್ಲದ ಮಕ್ಕಳಿಗಾಗಿ ರಾತ್ರಿ ಶಾಲೆಗಳನ್ನು ತೆರೆದರು. 1904ರಲ್ಲಿ ಶಿವಗಿರಿಯಲ್ಲಿ ಕುರುವರ ಮಕ್ಕಳಿಗಾಗಿ ರಾತ್ರಿ ಶಾಲೆಯೊಂದನ್ನು ತೆರೆದರು. ಚೆಂಬಳಂತಿಯಲ್ಲಿ ಪುಲಯ್ಯ ಜನಾಂಗದ ಮಕ್ಕಳಿಗಾಗಿ ಶಾಲೆಯನ್ನು ಇದೇ ಸಮಯದಲ್ಲಿ ಸ್ಥಾಪಿಸಿದರು. 1905ರಲ್ಲಿ ಗುರುದೇವರ 50ನೆಯ ಜನ್ಮೋತ್ಸವದ ಸಂದರ್ಭದಲ್ಲಿ ವರ್ಕಳದ ಸಮೀಪದ ಮೆಟ್ಟೂರು ಗ್ರಾಮದಲ್ಲಿ ಪರಯ್ಯ ಮತ್ತು ಪುಲಯ್ಯರ ಮಕ್ಕಳಿಗಾಗಿ ಒಂದು ರಾತ್ರಿ ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಗಳಲ್ಲಿ ಗುರುದೇವರ ಶಿಷ್ಯರು ಉಪಾಧ್ಯಾಯರಾಗಿ ಕಲಿಸುತ್ತಿದ್ದರು. ಗುರುಗಳು ಸಿಲೋನಿನಲ್ಲಿ ತನ್ನ ಶಿಷ್ಯ ಸತ್ಯವೃತ ಸ್ವಾಮಿಗಳಿಂದ 41ಕ್ಕೂ ಹೆಚ್ಚು ರಾತ್ರಿ ಶಾಲೆ ಮತ್ತು ಪ್ರಾರ್ಥನಾ ಮಂದಿರಗಳನ್ನು ಸ್ಥಾಪಿಸಿದರು. ಗುರುಗಳು ಪ್ರತಿಷ್ಠೆ ಮಾಡಿದ ಪ್ರತಿ ದೇವಸ್ಥಾನದ ಬದಿಯಲ್ಲಿ ಶಾಲೆಗಳನ್ನು ತೆರೆಯಲು ಮೊದಲ ಆದ್ಯತೆ ಕೊಡುತ್ತಿದ್ದರು. ಸಮಾಜದ ಪ್ರತಿ ವರ್ಗ ಮತ್ತು ಪ್ರಾಯದವರು ವಿದ್ಯಾವಂತರಾಗಬೇಕು ಎನ್ನುವುದು ಅವರ ಶಿಕ್ಷಣ ನೀತಿಯಾಗಿತ್ತು.

॥ ಕೃಪೆ: ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಗ್ರಂಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News