ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ ಆರೋಪ: ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಪೊರಕೆ ಚಳವಳಿ

Update: 2022-02-02 14:11 GMT

ಮೈಸೂರು,ಫೆ.2: ರಾಯಚೂರು ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ ತೋರಿದ್ದಾರೆಂದು ಆರೋಪಿಸಿ ಗಾಂಧಿನಗರ ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರ ಒಕ್ಕೂಟದ ವತಿಯಿಂದ ಬೃಹತ್ ಪೊರಕೆ ಚಳವಳಿ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ನಗರದ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ದಲಿತರು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗಾಂಧಿನಗರ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಪುಲಿಕೇಶಿ ರಸ್ತೆ, ಅಶೋಕ ರಸ್ತೆ, ದೊಡ್ಡ ಗಡಿಯಾರ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ ಮೂಲಕ ಸಾಗಿ ಜೆಎಲ್‌ಬಿ ರಸ್ತೆ, ಮೆಟ್ರೊಪೋಲ್ ವೃತ್ತ, ಹುಣಸೂರು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿದರು.

ನಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾತನಾಡಿದ ಜ್ಞಾನಪ್ರಕಾಶ್ ಸ್ವಾಮೀಜಿ, ನಾಳೆಯೊಳಗೆ ಮಲ್ಲಿಕಾರ್ಜಜ ಗೌಡ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು. ಈಗಾಗಲೆ ಮೈಸೂರು ಮಂಡ್ಯ, ಚಾಮರಾಜನಗರ ಮಡಿಕೇರಿ ಜಿಲ್ಲೆಗಳ ಮುಖಂಡರುಗಳ ಜೊತೆ ಚರ್ಚೆ ನಡೆಸಲಾಗಿದೆ. ಮುಂದಿನ ಹೋರಾಟದ ರೂಪು ರೇಷೆಗಳನ್ನು ಸಿದ್ದಪಡಿಸಿ ರಾಜ್ಯ ಬಂದ್‌ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪೊರಕೆ ಚಳವಳಿ ಮೈಸೂರಿಗೆ ಮಾತ್ರ ಸೀಮಿತಗೊಳ್ಳುವುದಿಲ್ಲ, ಇದು ಬೆಂಗಳೂರಿನ ಹೈಕೊರ್ಟ್ ಮುಂಭಾಗ ಬರುತ್ತದೆ. ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಪಡಿಸಲಾಗುವುದು. ಈ ಪೊರಕೆ ಚಳವಳಿ ಉಗ್ರರೂಪ ತಾಳಿ ಬಜೆಟ್ ಅಧಿವೇಶನ ಮಾಡಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್,  ನಗರಪಾಲಿಕೆ ಸದಸ್ಯೆರುಗಳಾದ ಪಲ್ಲವಿ ಬೇಗಂ, ಡಾ.ಅಶ್ವಿನಿ ಶರತ್, ಮಾಜಿ ನಗರಪಾಲಿಕೆ ಸದಸ್ಯ ಸಿದ್ದಪ್ಪ, ಸುರೇಶ್, ಉದಯಕುಮಾರ್,  ಎಸ್‌ಡಿಪಿಐ ಅಬ್ದುಲ್ ಮಜೀದ್, ದಸಂಸ ಮುಖಂಡರುಗಳಾದ ಚೋರನಹಳ್ಳಿ ಶಿವಣ್ಣ, ಕಲ್ಲಹಳ್ಳಿ ಕುಮಾರ್, ವಕೀಲ ಪುನೀತ್, ಗಾಂಧಿನಗರದ ಮುಖಂಡರುಗಳಾದ ಪ್ರಕಾಶ್, ಅಜಯ್, ಕರ್ಣ, ರಮೆಶ್, ಸೇರಿದಂತೆ ನೂರಾರು ಬಂದಿ ಭಾಗವಹಿಸಿದ್ದರು.

"ನಾನು ದಲಿತ ಎಂದು ಹೇಳಿಕೊಳ್ಳುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಏಕೆ ಈ ಪ್ರಕರಣದ ಬಗ್ಗೆ ಒಂದು ಹೇಳಿಕೆಯನ್ನು ನೀಡದೆ ಮೌನವಹಿಸಿದ್ದಾರೆ? ಕೂಡಲೇ ಅವರು ವಿಧಾನಸೌಧದಲ್ಲಿ ಇದರ ಬಗ್ಗೆ ಧನಿ ಎತ್ತಬೇಕು"
ಪುರುಷೋತ್ತಮ್, ಮಾಜಿ ಮೇಯರ್.


"ಅಂಬೇಡ್ಕರ್ ಈ ದೇಶದ ಮಹಾನ್ ನಾಯಕ ಅವರಿಗೆ ಅಪಮಾನ ಮಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಷ್ಟು ದಿನ ಕಳೆದರೂ ಏಕೆ ಮಲ್ಲಿಕಾರ್ಜುನ ಗೌಡನ ವಿರುದ್ಧ ಕ್ರಮ ಕೈಗೊಂಡಿಲ್ಲ? ಸರ್ಕಾರ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದರೆ ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಕಾರಣವಾಗುತ್ತದೆ.
ಡಾ.ಅಶ್ವಿನ್ ಶರತ್, ನಗರಪಾಲಿಕೆ ಸದಸ್ಯೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News