'ಆರೆಸ್ಸೆಸ್‌, ಬಿಜೆಪಿಯನ್ನು ಟೀಕಿಸಿದ್ದಕ್ಕೆ ಮೀಡಿಯಾ ಒನ್‌ ಚಾನೆಲ್‌ ಗೆ ಈ ಬೆದರಿಕೆ'

Update: 2022-02-03 05:23 GMT
ಸಿ ದಾವೂದ್

ಹೊಸದಿಲ್ಲಿ: ಮುಸ್ಲಿಮರ ಒಡೆತನದಲ್ಲಿರುವ ಚಾನೆಲ್‌ ಎಂದೋ, ಅಥವಾ ಮುಸ್ಲಿಂ ಸಂಘಟನೆಯಾದ ಜಮಾತೆ ಇಸ್ಲಾಮಿ ಹಿಂದ್‌ ಸಂಘಟನೆಗೆ ಸೇರಿದವರ ಒಡೆತನದಲ್ಲಿದೆ ಎಂಬ ಕಾರಣದಿಂದ ಮೀಡಿಯಾ ಒನ್‌ ಚಾನೆಲ್‌ ಅನ್ನು ನಿರ್ಬಂಧಿಸಲಾಗಿದೆಯೇ ಎಂಬ ಪ್ರಶ್ನೆಗೆ ಮೀಡಿಯಾ ಒನ್‌(MediaOne) ಮಲಯಾಳಂ ಚಾನೆಲ್‌ ನ ಕಾರ್ಯ ನಿರ್ವಾಹಕ ಸಂಪಾದಕ ಸಿ. ದಾವೂದ್, "ಈ ಕುರಿತು ಸ್ಪಷ್ಟತೆಯಿಲ್ಲ" ಎಂದು ಹೇಳಿದರು. ಜನವರಿ 31ರಂದು ಮೀಡಿಯಾ ಒನ್‌ ಚಾನೆಲ್‌ ಪ್ರಸಾರ ನಿಲ್ಲಿಸುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸೂಚಿಸಿತ್ತು.

2011ರಲ್ಲಿ ಮೀಡಿಯಾ ಒನ್‌ ಚಾನೆಲ್‌ ಆರಂಭವಾದಂದಿನಿಂದ ದಾವೂದ್‌ ರವರು ವಾಹಿನಿಯ ಭಾಗವಾಗಿದ್ದಾರೆ. ಇಲ್ಲಿ ಮೀಡಿಯಾ ಒನ್‌ ಕೇಂದ್ರದ ಬಿಜೆಪಿ ಸರಕಾರವನ್ನು ಟೀಕಿಸುತ್ತಿರುವ ಮತ್ತು ವಿಮರ್ಶಿಸುತ್ತಿರುವ ಕಾರಣದಿಂದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು  ವಾಹಿನಿಯನ್ನು ʼನಾಟಕೀಯವಾಗಿ ಬೆದರಿಸುವʼ ತಂತ್ರವನ್ನು ಕೈಗೊಂಡಿರಬಹುದು. ಆರೆಸ್ಸೆಸ್‌, ಬಿಜೆಪಿಯನ್ನು ಟೀಕಿಸಿದ್ದಕ್ಕೆ ಮೀಡಿಯಾ ಒನ್‌ ಚಾನೆಲ್‌ ಗೆ ಈ ಬೆದರಿಕೆ ಎಂದು ದಾವೂದ್‌ thequint.com ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಚಿವಾಲಯದ ಆದೇಶವನ್ನು ಕೇರಳ ಹೈಕೋರ್ಟ್ ಬುಧವಾರ, 2 ಫೆಬ್ರವರಿ ವರೆಗೆ ಮುಂದೂಡಿದ ನಂತರ ಚಾನಲ್ ಮತ್ತೆ ಪ್ರಸಾರವಾಗಿದೆ. ಪ್ರಮೋದ್‌ ರಾಮನ್‌ ವಾಹಿನಿಯ ಸಂಪಾದಕರಾಗಿದ್ದಾರೆ.

ಮಾಧ್ಯಮಂ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್ ಕಂಪನಿಯ ಭಾಗವಾಗಿರುವ ಚಾನಲ್‌ಗೆ ಭದ್ರತಾ ಅನುಮತಿಯನ್ನು ಗೃಹ ಸಚಿವಾಲಯದ ನಿರಾಕರಣೆ ಆಧರಿಸಿ ಈ ಆದೇಶವನ್ನು ಹೊರಡಿಲಾಗಿದೆ. "ರಾಷ್ಟ್ರೀಯ ಭದ್ರತೆ" ಕಾರಣದ ಮೇಲೆ ಚಾನೆಲ್‌ಗೆ ಭದ್ರತಾ ಅನುಮತಿಯನ್ನು MHA ನಿರಾಕರಿಸಿದೆ. 2016 ರಲ್ಲಿ ಸಹ, ಗೃಹ ಸಚಿವಾಲಯ "ರಾಷ್ಟ್ರೀಯ ಭದ್ರತೆ" ಕಾರಣವನ್ನು ಉಲ್ಲೇಖಿಸಿ ಭದ್ರತಾ ಅನುಮತಿಯನ್ನು ನಿರಾಕರಿಸಿತ್ತು.

ಕ್ವಿಂಟ್ ಜೊತೆ ಮಾತನಾಡಿದ ದಾವೂದ್, “ನಾವು ದೇಶದ ಅತ್ಯಂತ ಅಂಚಿನಲ್ಲಿರುವ ವರ್ಗಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವ್ಯಾಪಕವಾಗಿ ಕವರ್ ಮಾಡುತ್ತಿದ್ದೇವೆ. ಇದು ಸಿಎಎ(CAA) ವಿರೋಧಿ ಪ್ರತಿಭಟನೆಗಳು ಮತ್ತು ರೈತರ ಪ್ರತಿಭಟನೆಗಳ ವ್ಯಾಪ್ತಿಯನ್ನೂ ಒಳಗೊಂಡಿದೆ. ಫೆಬ್ರವರಿ 1 ರಂದು, ಕೇರಳ ಬಿಜೆಪಿಯ ರಾಜ್ಯ ನಾಯಕ ಚಾನೆಲ್ "ದೇಶ ವಿರೋಧಿ" ಎಂದು ಆರೋಪಿಸಿದ್ದರು ಎಂದು ಅವರು ಹೇಳಿದರು.

2013 ರಲ್ಲಿ ಮೀಡಿಯಾ ಒನ್ ಪ್ರಸಾರಕ್ಕೆ ಬಂದಾಗ, ಚಾನೆಲ್ ಕಾರ್ಯನಿರ್ವಹಿಸಲು ಪರವಾನಗಿ ನೀಡಿದ ಎರಡು ವರ್ಷಗಳ ನಂತರ, ದಾವೂದ್ ಕೇರಳದ ಕೋಝಿಕ್ಕೋಡ್‌ನಲ್ಲಿ ಅದರ ಮೊದಲ ಕಚೇರಿಯಲ್ಲಿದ್ದರು. “ಮಾಧ್ಯಮಗಳು ಧ್ವನಿಯಿಲ್ಲದವರಿಗೆ ಧ್ವನಿ ನೀಡುತ್ತವೆ ಎಂಬುದು ಒಂದು ಕ್ಲೀಷೆ. ಮೀಡಿಯಾಒನ್‌ನಲ್ಲಿ ಯಾರೂ ಧ್ವನಿಯಿಲ್ಲದವರಲ್ಲ ಎಂಬುದು ನಮಗೆ ಸ್ಪಷ್ಟವಾಗಿದೆ." ಎಂದು ತಮ್ಮ ಚಾನೆಲ್‌ ನ ನಿಲುವಿನ ಬಗ್ಗೆ ಅವರು ಹೇಳಿದರು.

ಇದನ್ನೂ ಓದಿ: ಮೀಡಿಯಾ ಒನ್ ಪ್ರಸಾರ ತಡೆ: ಕೇಂದ್ರದ ನಿರ್ಬಂಧಕ್ಕೆ ತಡೆ ನೀಡಿದ ಮಧ್ಯಂತರ ಆದೇಶ ವಿಸ್ತರಿಸಿದ ಹೈಕೋರ್ಟ್ 

12 ಡಿಸೆಂಬರ್ 2019 ರಂದು ಭಾರತೀಯ ಪೌರತ್ವಕ್ಕೆ ಧರ್ಮವನ್ನು ಮಾನದಂಡವನ್ನಾಗಿ ಮಾಡಿದ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಾಗ, ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಮೀಡಿಯಾ ಒನ್ ವರದಿ ಮಾಡಿತ್ತು. ಡಿಸೆಂಬರ್ 15 2019 ರಂದು, ಚಾನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮದ ದೃಶ್ಯಗಳನ್ನು ಪ್ರಸಾರ ಮಾಡಿತು. "ಜಾಮಿಯಾದಿಂದ ಬಂದ ಮೊದಲ ದೃಶ್ಯಗಳು ನನಗೆ ಇನ್ನೂ ನೆನಪಿದೆ. ಇಬ್ಬರು ಯುವತಿಯರು (ಲದೀದಾ ಫರ್ಝಾನಾ ಮತ್ತು ಆಯಿಶಾ ರೆನ್ನಾ) ಪ್ರತಿಭಟನೆಯನ್ನು ಮುನ್ನಡೆಸಿದರು. ಪ್ರತಿಭಟನೆಯ ದೃಶ್ಯಗಳನ್ನು ಮೊದಲು ಪ್ರಸಾರ ಮಾಡಿದ್ದು ನಾವೇ,” ಎಂದು ದಾವೂದ್ ಹೇಳಿದರು.

ಫೆಬ್ರವರಿ 2020 ರಲ್ಲಿ, ದಿಲ್ಲಿಯಲ್ಲಿ ಕೋಮು ಗಲಭೆಗಳು ಭುಗಿಲೆದ್ದಂತೆ, ನಗರದಲ್ಲಿ ಮೀಡಿಯಾ ಒನ್‌ನ ರಾಷ್ಟ್ರೀಯ ಬ್ಯೂರೋ ಕನಿಷ್ಠ 53 ಜೀವಗಳನ್ನು ಬಲಿತೆಗೆದುಕೊಂಡ ಈ ರಕ್ತಪಾತದ ಕಥೆಗಳನ್ನು ಪ್ರಸಾರ ಮಾಡಿತು. ಸ್ವಲ್ಪ ಸಮಯದ ನಂತರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚಾನೆಲ್‌ ನ ಪ್ರಸಾರವನ್ನು 48 ಗಂಟೆಗಳ ಕಾಲ ನಿಷೇಧಿಸಿತು. ಆದಾಗ್ಯೂ, ಚಾನೆಲ್ ತನ್ನ ಪ್ರಸಾರದಲ್ಲಿ "ವಸ್ತುನಿಷ್ಠವಾಗಿದೆ" ಎಂದು ಅವರು ಹೇಳಿದರು.

"ನಾವು ಸರ್ಕಾರದ ನೀತಿಗಳನ್ನು ಟೀಕಿಸುವಲ್ಲಿ ವಸ್ತುನಿಷ್ಠತೆ ಮತ್ತು ವಾಸ್ತವಿಕತೆಯನ್ನು ಹೊಂದಿದ್ದೇವೆ. ಟೀಕಿಸುವುದು ಮಾಧ್ಯಮದ ಕರ್ತವ್ಯ. ರೈತರ ಪ್ರತಿಭಟನೆಯ ಸಂದರ್ಭದಲ್ಲಿ  2020 ಮತ್ತು  2021ರಲ್ಲಿ ದಿಲ್ಲಿಯ ಗಡಿಯುದ್ದಕ್ಕೂ ತೆರಳಿ ನಾವು ವರದಿ ಮಾಡಿದ್ದೇವೆ. ಇದೀಗ ಚಾನೆಲ್‌ ನ ಪ್ರಸಾರ ನಿರ್ಬಂಧಿಸುತ್ತಿರುವುದು ಮಾಧ್ಯಮ ವ್ಯವಸ್ಥೆಗೆ ಅವಮಾನ ಎಂದು ದಾವೂದ್‌ ಹೇಳಿದರು.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News