ಕಸಾಪ ಆಧುನಿಕ ತಂತ್ರಜ್ಞಾನ ಅಳವಡಿಕೆ ಅತಿ ಅವಶ್ಯ: ಸಚಿವ ಸುನೀಲ್ ಕುಮಾರ್

Update: 2022-02-02 18:40 GMT

ಬೆಂಗಳೂರು, ಫೆ.2: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಆಧುನಿಕ ತಂತ್ರಜ್ಞಾನದ ಅಳವಡಿಕೆ ಅತೀ ಅವಶ್ಯಕವಾಗಿದೆ. ಪರಿಷತ್ತಿನ ಜೊತೆ ಕನ್ನಡ ಕಟ್ಟುವ ಕೆಲಸದಲ್ಲಿ ಅತ್ಯಂತ ಉತ್ಸಾಹದಿಂದ ಭಾಗಿಯಾಗಲಿದ್ದು, ಪರಿಷತ್ತಿಗೆ ಸಹಕಾರ ನೀಡಲು ಸದಾ ಸಿದ್ಧನಿದ್ದೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿದ ಸಚಿವರು, ಇಲಾಖೆ ವತಿಯಿಂದ ಸ್ವಾತಂತ್ರ್ಯ ಅಮೃತೋತ್ಸವ ನೆನಪಿನಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಎಂಬ ವಿಶೇಷ ಕಾರ್ಯಕ್ರಮವನ್ನು ವರ್ಷಪೂರ್ತಿ ಆಚರಣೆ ಮಾಡಲಿದ್ದು, ಈ ಅಭಿಯಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಜೊತೆಗೆ ಸೇರಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು. 

ಡಾ. ಮಹೇಶ ಜೋಶಿ ಅವರು ದೂರದರ್ಶನದಲ್ಲಿ ಹಲವಾರು ನೂತನ ಪ್ರಯತ್ನಗಳನ್ನು ಮಾಡಿ ಯಶಸ್ಸು ಗಳಿಸಿದ್ದರು. ಅಂತೆಯೇ ಪರಿಷತ್ತಿನಲ್ಲೂ ಹೊಸ ಹೊಸ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಿ ಹೊಸ ರೂಪ ತರುತ್ತಾರೆ ಎಂಬ ನಂಬಿಕೆ ಇದೆ ಎಂದರು. 

ನಂತರ ಶ್ರೀಕೃಷ್ಣರಾಜ ಪರಿಷನ್ಮಂದಿರ, ಅಕ್ಕಮಹಾದೇವಿ ಸಭಾಂಗಣ, ಬಿ.ಎಂ.ಶ್ರೀ. ಅಚ್ಚುಕೂಟ, ಸರಸ್ವತಿ ಗ್ರಂಥಭಂಡಾರ, ಪರಿಷತ್ತಿನ ಪುಸ್ತಕ ಮಾರಾಟ ಕೇಂದ್ರ ಹಾಗೂ ಪರಿಷತ್ತಿನ ಆವರಣದಲ್ಲಿರುವ ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ. ಕಚೇರಿ ವೀಕ್ಷಿಸಿ, ಅವುಗಳ ಐತಿಹಾಸಿಕ ಮಹತ್ವವನ್ನು ತಿಳಿದುಕೊಂಡರು. ಇದೇ ವೇಳೆ ಸರಸ್ವತೀ ಗ್ರಂಥಭಂಡಾರದಲ್ಲಿ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯ ತಾಳೆಗರಿ ಪ್ರತಿಯನ್ನು ಸಚಿವರು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿ, ಹೆಮ್ಮೆ ಪಟ್ಟರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು, ಗೌರವ ಸಂಚಾಲಕ ಕೆ. ರಾಜಕುಮಾರ್, ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News