ಅಸ್ಸಾಂ: ಭಾರತೀಯ ಪೌರತ್ವ ಸಾಬೀತುಪಡಿಸಲು ಕಾನೂನು ಹೋರಾಟ ನಡೆಸುತ್ತಿದ್ದ ವ್ಯಕ್ತಿ ಆತ್ಮಹತ್ಯೆ

Update: 2022-02-03 05:36 GMT
ಮಾಣಿಕ್ ದಾಸ್ (Photo: ndtv.com)

ಗುವಾಹಟಿ: ರಾಷ್ಟ್ರೀಯ ನಾಗರಿಕರ ನೋಂದಣಿಯಲ್ಲಿ (ಎನ್‌ಆರ್‌ಸಿ) ತನ್ನ ಹೆಸರು ಕಾಣಿಸಿಕೊಂಡಿದ್ದರೂ ಕೂಡ ವಿದೇಶಿಗರ ನ್ಯಾಯಮಂಡಳಿಯಲ್ಲಿ ಪೌರತ್ವ ವಿಚಾರದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದ 60 ವರ್ಷದ ವ್ಯಕ್ತಿ ಮೊರಿಗಾಂವ್ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಆತ್ಮಹತ್ಯೆಗೆ ಶರಣಾಗಿರುವ ಬೋರ್ಖಾಲ್ ಗ್ರಾಮದ ಮಾಣಿಕ್ ದಾಸ್ ತನ್ನ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಟ್ರಿಬ್ಯೂನಲ್‌ನಲ್ಲಿನ ವಿಚಾರಣೆಗೆ ಹಾಜರಾಗಿದ್ದಾಗ ತಾನು ಎದುರಿಸಿದ "ಹತಾಶೆ ಮತ್ತು ಮಾನಸಿಕ ಹಿಂಸೆ"ಯಿಂದಾಗಿ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ದಾಸ್ ಕುಟುಂಬದವರು ಆರೋಪಿಸಿದ್ದಾರೆ.

ಜಾಗಿ ರಾವುಡ್ ಸಮೀಪದ ಬೋರ್ಖಾಲ್ ಗ್ರಾಮದ ಮಾಣಿಕ್ ದಾಸ್ ಮೋರಿಗಾಂವ್ ಜಿಲ್ಲೆಯ ಜಾಗಿ ರಸ್ತೆ ಒಣಮೀನು ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರ ಮಾಡಿಕೊಂಡಿದ್ದರು.

ದಾಸ್ ರವಿವಾರದಿಂದ ನಾಪತ್ತೆಯಾಗಿದ್ದು, ಮಂಗಳವಾರ ಸಂಜೆ ಅವರ ಮನೆ ಸಮೀಪದ ಗುಡ್ಡದ ಮೇಲೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊರಿಗಾಂವ್‌ನಲ್ಲಿರುವ ವಿದೇಶಿಯರ ನ್ಯಾಯಮಂಡಳಿ-2ರಲ್ಲಿ ದಾಸ್ ಅವರ ವಿರುದ್ಧದ ಪ್ರಕರಣದಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ.

"ನಮ್ಮೆಲ್ಲರ ಹೆಸರುಗಳು ಅಸ್ಸಾಂ ಎನ್‌ಆರ್‌ಸಿಯಲ್ಲಿ ಕಾಣಿಸಿಕೊಂಡ ನಂತರ ತಂದೆಗೆ ನೋಟಿಸ್ ಕಳುಹಿಸಲಾಗಿದೆ. ಪೊಲೀಸರು ಯಾಕೆ ಅವರಿಗೆ ನೋಟಿಸ್ ಕಳುಹಿಸಿ ಕೇಸು ದಾಖಲಿಸಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಎನ್‌ಆರ್‌ಸಿಯಲ್ಲಿ ನನ್ನ ತಂದೆಯ ಹೆಸರು ಕೂಡ ಇದೆ. ಸಂಪೂರ್ಣ ಪ್ರಕ್ರಿಯೆಯಿಂದಾಗಿ ಅವರು ನಿರಾಶೆಗೊಂಡರು ಹಾಗೂ  ಮಾನಸಿಕ ಹಿಂಸೆಯನ್ನು ಎದುರಿಸಿದರು. ಅಸ್ಸಾಂ ಎನ್‌ಆರ್‌ಸಿಗೆ ಸೇರ್ಪಡೆಗೊಂಡವರನ್ನು ವಿದೇಶಿ ಅಥವಾ ಬಾಂಗ್ಲಾದೇಶಿ ಎಂದು ಪರಿಗಣಿಸಿದರೆ ಎನ್‌ಆರ್‌ಸಿ ನಡೆಸುವುದರಿಂದ ಏನು ಪ್ರಯೋಜನ'' ಎಂದು ಅವರ ಮಗ ಕಾರ್ತಿಕ್ ದಾಸ್ ಪ್ರಶ್ನಿಸಿದ್ದಾರೆ.

"ಪ್ರಕರಣ ಹಲವು ವರ್ಷಗಳಿಂದ ನಡೆಯುತ್ತಿದೆ. ಪೊಲೀಸರು ಅವರಿಗೆ ಏಕೆ ನೋಟಿಸ್ ಕಳುಹಿಸಿದ್ದಾರೆ ಹಾಗೂ ಪ್ರಕರಣವನ್ನು ದಾಖಲಿಸಿದ್ದಾರೆಂದು ನಮಗೆ ತಿಳಿದಿಲ್ಲ. ನನ್ನ ತಂದೆಯ  ಹೆಸರಿನಲ್ಲಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಭೂ ದಾಖಲೆಗಳಂತಹ ಎಲ್ಲಾ ಮಾನ್ಯ ಕಾನೂನು ಗುರುತಿನ ದಾಖಲೆಗಳಿವೆ. ಅವರು ಸಂಪೂರ್ಣ ಪ್ರಕ್ರಿಯೆಯಿಂದ ಹತಾಶರಾಗಿದ್ದರು ಹಾಗೂ  ಮಾನಸಿಕ ಹಿಂಸೆಯನ್ನು ಎದುರಿಸಿದರು"  ಎಂದು ದಾಸ್ ಅವರ ಅಪ್ರಾಪ್ತ ಮಗಳು ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್ ಧರಿಸದೇ ತರಗತಿಗೆ ಬನ್ನಿ - ವಿದ್ಯಾರ್ಥಿಗಳಿಗೆ ಭದ್ರಾವತಿ ಪಟ್ಟಣ ಸರ್ಕಾರಿ ಕಾಲೇಜು ಸೂಚನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News