ಸಚಿವ ಸಂಪುಟದಿಂದ ಕೈಬಿಡುವುದು ಸಿಎಂ ವಿವೇಚನೆಗೆ ಬಿಟ್ಟದ್ದು: ಸಚಿವೆ ಶಶಿಕಲಾ ಜೊಲ್ಲೆ

Update: 2022-02-03 18:34 GMT

ಬೆಂಗಳೂರು, ಫೆ. 3: `ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಡುವುದು ಅಥವಾ ಮುಂದುವರಿಸುವುದು ಮುಖ್ಯಮಂತ್ರಿ ಹಾಗೂ ವರಿಷ್ಠರ ವಿವೇಚನೆಗೆ ಬಿಟ್ಟದ್ದು. ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ' ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಣೆ ನೀಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲ ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಕೆಲವರ ಅಭಿಪ್ರಾಯವಷ್ಟೇ. ಆ ರೀತಿಯಲ್ಲಿ ಏನೂ ಆಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ' ಎಂದು ತಿಳಿಸಿದರು.

ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರಚನೆ ವಿಚಾರದಲ್ಲಿ ನಾನು ಏನೂ ಮಾತನಾಡುವುದಿಲ್ಲ. ಪುನರಚನೆ ಸಂಬಂಧ ಕೆಲ ಶಾಸಕರು ತಮ್ಮ ಅನುಭವವನ್ನು ಹೇಳಿರಬಹುದು. ಸಚಿವ ಸಂಪುಟ ಬದಲಾವಣೆ ಬಗ್ಗೆ ನಾನೇನು ಮಾತನಾಡಲಾರೆ' ಎಂದು ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಅರ್ಚಕರಿಂದ ಮನವಿ ಪತ್ರ: ರಾಜ್ಯದಲ್ಲಿನ ಹಿಂದೂ ದೇವಾಲಯಗಳ ಖಾಸಗಿಕರಣ ವಿರೋಧಿಸಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.
ದೇವಾಲಯಗಳ ಅಧೀನದಲ್ಲಿ ಕೋಟ್ಯಂತರ ರೂ.ಬೆಲೆ ಬಾಳುವ ಆಸ್ತಿಗಳಿವೆ. ಖಾಸಗಿಕರಣ ಮಾಡಿದರೆ ಆ ಭೂಮಿ ಸಮಸ್ಯೆ ಆಗಲಿದೆ. ಅರ್ಚಕರಿಗೆ 60 ವರ್ಷಕ್ಕೆ ನಿವೃತ್ತಿ ಘೋಷಣೆ ಹಿಂಪಡೆಯಬೇಕು. ಪ್ರತಿ ತಿಂಗಳು ಪೂಜಾ ಸಾಮಗ್ರಿಗಳಿಗೆ ನೀಡುತ್ತಿರುವ ತಸ್ತೀಕ್ ಹಣ 4 ಸಾವಿರ ರೂ.ನಿಂದ 5 ಸಾವಿರ ರೂ.ಗಳಿಗೆ ಹೆಚ್ಚಳ ಮಾಡುವುದು ಸೇರಿದಂತೆ ಅರ್ಚಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒಕ್ಕೂಟದ ಕೆಎಸ್‍ಎನ್ ದೀಕ್ಷಿತ್ ಮನವಿ ಮಾಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News