'ಇದು ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿದಿರುವ ಅಪರಾಧ': ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

Update: 2022-02-04 14:11 GMT

ಬೆಂಗಳೂರು, ಫೆ. 4: `ಧಾರ್ಮಿಕ ಗುರುತು, ಆಚರಣೆ ಹಾಗೂ ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕುಗಳು. ವಿದ್ಯಾರ್ಥಿನಿಯರನ್ನು ಹೊರಗಟ್ಟಿ ಕಾಲೇಜಿನ ಗೇಟ್ ಬಂದ್ ಮಾಡಿದ್ದು ಆಧುನಿಕ ಭಾರತದ ಇತಿಹಾಸದಲ್ಲಿ ನಡೆದ ಘೋರ ಅಪಚಾರ. ಮೋದಿಯವರು ಹೇಳಿದ `ಬೇಟಿ ಬಚಾವೋ ಬೇಟಿ ಪಡಾವೋ' ಎಂಬ ಮಾತು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವೇ?' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, `ಭವಿಷ್ಯದ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ ಚಿಂತಿಸಬೇಕಾದ ಮಕ್ಕಳಲ್ಲಿ ಮತಾಂಧತೆಯ ವಿಷಬೀಜ ಬಿತ್ತಿ ತನ್ನ ಕ್ಷುದ್ರ ರಾಜಕೀಯ ಅಜೆಂಡಾವನ್ನು ಕಲಿಕಾ ಕೇಂದ್ರಗಳಿಗೆ ಆರೆಸೆಸ್ಸ್ ತಲುಪಿಸಿದೆ. ಶಿಕ್ಷಣ ಕ್ಷೇತ್ರದ ಗುಣಮಟ್ಟ ವೃದ್ಧಿಸುವ ಯೋಚನೆ ಬಿಟ್ಟು ಹಿಜಾಬ್(ಸ್ಕಾರ್ಫ್) ಹೆಸರಲ್ಲಿ ವಿದ್ಯಾರ್ಥಿಗಳನ್ನ ಶಿಕ್ಷಣವಂಚಿತರನ್ನಾಗಿಸುವುದು ಇದರ ಹಿಂದಿರುವ ಹುನ್ನಾರ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಉಡುಪಿ ಮತ್ತು ಕುಂದಾಪುರದ ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಕಾಲೇಜಿನ ಒಳಪ್ರವೇಶಿಸದಂತೆ ತಡೆದಿರುವುದು ಖಂಡನೀಯ. ಇದು ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿದಿರುವ ಅಪರಾಧ. ಈಗ ಹಿಜಾಬ್(ಸ್ಕಾರ್ಫ್), ಕುಂಕುಮ, ತಾಯತಗಳ ಮಧ್ಯೆಯೂ ಸರಕಾರ ಭೇದ-ಭಾವ ಮಾಡಲಿದೆಯೇ?' ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News