ಚಿಕ್ಕಮಗಳೂರು: ಬದುಕಿರುವಾಗಲೇ ವೃದ್ಧೆಯ ಹೆಸರಿನಲ್ಲಿ ನಕಲಿ ಮರಣಪತ್ರ, ವಂಶವೃಕ್ಷ ಸೃಷ್ಟಿ!

Update: 2022-02-04 14:30 GMT
ನಕಲಿ ಮರಣಪತ್ರ

ಚಿಕ್ಕಮಗಳೂರು, ಫೆ.4: ಜಮೀನು ಮಾಲಕಿ ಬದುಕಿರುವಾಗಲೇ ಆಕೆ ಮೃತಪಟ್ಟಿದ್ದಾಳೆಂದು ನಕಲಿ ಮರಣ ಪ್ರಮಾಣಪತ್ರ ಹಾಗೂ ವಂಶವೃಕ್ಷ ತಯಾರಿಸಿ ಆಕೆಯ ಸಂಬಂಧಿಗಳೇ ವೃದ್ಧೆಯ ಜಮೀನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎನ್ನಲಾದ ಘಟನೆಯೊಂದು ಜಿಲ್ಲೆಯ ಎನ್.ಆರ್.ಪುರ ಪಟ್ಟಣದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.

ಹಾಲಿ ನರಸಿಂಹರಾಜಪುರ ಪಟ್ಟಣದ ಅಗ್ರಹಾರ, ಕಮ್ಮಿಗಳ ಬೀದಿ ಬಡಾವಣೆಯ ನಿವಾಸಿಯಾಗಿರುವ ಸಾರಮ್ಮ ಎಂಬವರೇ ಬದುಕಿರುವಾಗಲೇ ದಾಖಲೆಗಳಲ್ಲಿ ಮೃತಪಟ್ಟಿರುವ ವೃದ್ಧೆಯಾಗಿದ್ದು, ಈಕೆಯ ಸಂಬಂಧಿಕರಾದ ಬಾಬು ಹಾಗೂ ಶೀಜಾ ಎಂಬವರೇ ವೃದ್ಧೆಯ ಆಸ್ತಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಕಬಳಿಸುವ ಸಂಚು ಮಾಡಿದ್ದಾರೆ ಎನ್ನಲಾಗಿದೆ.

ವೃದ್ಧೆ ಸಾರಮ್ಮ ನರಸಿಂಹರಾಜಪುರ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದಲ್ಲಿ 1 ಎಕರೆ 16 ಗುಂಟೆ ಜಮೀನು ಹೊಂದಿದ್ದು, ಈ ಜಮೀನಿನಲ್ಲಿ ರಬ್ಬರ್ ಬೆಳೆ ಬೆಳೆದಿದ್ದರು. 2020ರಲ್ಲಿ ವೃದ್ಧೆ ಕೊರೋನಾ ಪಾಸಿಟಿವ್‍ಗೆ ತುತ್ತಾಗಿದ್ದು, ಈ ವೇಳೆ ತನ್ನ ಜಮೀನು ನಿರ್ವಹಣೆ ಮಾಡುವಂತೆ ಸಂಬಂಧಿಗಳಾದ ಬಾಬು ಹಾಗೂ ಶೀಜಾ ದಂಪತಿಗೆ ತಿಳಿಸಿ ವೃದ್ಧೆ ಸಾರಮ್ಮ ಶಿವಮೊಗ್ಗದಲ್ಲಿರುವ ತನ್ನ ಮಗಳ ಮನೆಗೆ ತೆರಳಿದ್ದರು.

2 ವರ್ಷಗಳ ಕಾಲ ಮಗಳ ಮನೆಯಲ್ಲೇ ಇದ್ದ ಸಾರಮ್ಮ ಎನ್.ಆರ್.ಪುರ ಪಟ್ಟಣಕ್ಕೆ ಹಿಂದಿರುಗದ ಪರಿಣಾಮ ವೃದ್ಧೆಯ ಜಮೀನು ನೋಡಿಕೊಂಡಿದ್ದ ಬಾಬಾ ಹಾಗೂ ಶೀಜಾ ಪಟ್ಟಣದ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಹಾಗೂ ತಾಲೂಕು ಕಚೇರಿ ಅಧಿಕಾರಿಗಳಿಗೆ ಹಣ ನೀಡಿ ವೃದ್ಧೆ ಮೃತಪಟ್ಟಿದ್ದಾಳೆಂದು ನಕಲಿ ಮರಣ ಪ್ರಮಾಣ ಪತ್ರ ಹಾಗೂ ನಕಲಿ ವಂಶವೃಕ್ಷವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ವಂಶವೃಕ್ಷದಲ್ಲಿ ಬಾಬು ಸಾರಮ್ಮನ ಮಗ ಎಂದು ಸುಳ್ಳು ಹೆಸರು ಸೇರಿಸಿದ್ದರು. ಹೀಗೆ ನಕಲಿ ಮರಣಪತ್ರ ಹಾಗೂ ವಂಶವೃಕ್ಷದ ಸಹಾಯದಿಂದ ವೃದ್ಧೆಯ ಹೆಸರಿನಲ್ಲಿದ್ದ 1.16 ಎಕರೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸುವ ಮೂಲಕ ಬಾಬು ಹಾಗೂ ಶೀಜಾ ವೃದ್ಧೆಯ ಜಮೀನನ್ನು ಅಕ್ರಮವಾಗಿ ಕಬಳಿಸಲು ಹುನ್ನಾರ ನಡೆಸಿದ್ದರು ಎಂದು ದೂರಲಾಗಿದೆ. 

ಇತ್ತೀಚೆಗೆ ಎನ್.ಆರ್.ಪುರ ಪಟ್ಟಣದ ತನ್ನ ಮನೆಗೆ ಆಗಮಿಸಿದ್ದ ವೃದ್ಧೆ ಸಾರಮ್ಮ ಪಡಿತರ ಪಡೆಯುವ ಸಲುವಾಗಿ ನ್ಯಾಯಬೆಲೆ ಅಂಗಡಿಗೆ ತೆರಳಿದ್ದಾಳೆ. ಈ ವೇಳೆ ವೃದ್ಧೆಯ ಹೆಸರಿನಲ್ಲಿದ್ದ ಪಡಿತರಚೀಟಿ ರದ್ದಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ವೃದ್ಧೆ ತಾಲೂಕು ಕಚೇರಿಗೆ ತೆರಳಿ ತನ್ನ ಹೆಸರಿನಲ್ಲಿದ್ದ ಪಡಿತರಚೀಟಿ ರದ್ದಾಗಿರುವ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಸಾರಮ್ಮ ಮೃತಪಟ್ಟಿರುವ ಬಗ್ಗೆ ಮರಣಪ್ರಮಾಣ ಪತ್ರ ಸಲ್ಲಿಕೆಯಾಗಿರುವುದು ವೃದ್ಧೆಯ ಗಮನಕ್ಕೆ ಬಂದಿದೆ. 

ಅಲ್ಲದೇ ತಾಲೂಕು ಕಚೇರಿಯಲ್ಲಿ ಸಾರಮ್ಮ ಹೆಸರಿನಲ್ಲಿದ್ದ ಜಮೀನಿನ ಪೌತಿ ಖಾತೆ ಮಾಡಿಸಲು ಸಂಬಂಧಿಗಳಾದ ಬಾಬು ಹಾಗೂ ಶೀಜಾ ಅರ್ಜಿ ಸಲ್ಲಿಸಿರುವುದು ವೃದ್ಧೆಯ ಗಮನಕ್ಕೆ ಬಂದಿದೆ. ಈ ಸಂಬಂಧ ವೃದ್ಧೆಯು ಬಾಬು ಹಾಗೂ ಶೀಜಾ ಬಳಿ ವಿಚಾರಿಸಿದಾಗ ಜಮೀನಿನ ತಂಟೆಗೆ ಬಂದಲ್ಲಿ ಕೊಲೆ ಮಾಡುವುದಾಗಿ ಜೀವಬೆದರಿಕೆಯನ್ನೂ ಹಾಕಿದ್ದಾರೆ. ಜೀವಬೆದರಿಕೆಯಿಂದಾಗಿ ಸಾರಮ್ಮ ಸದ್ಯ ಎನ್.ಆರ್.ಪುರ ಪಟ್ಟಣ ತೊರೆಯುವಂತಾಗಿದ್ದು, ಸಂಬಂಧಿಗಳ ಮೂಲಕ ಈ ಪ್ರಕರಣ ಸಂಬಂಧ ವೃದ್ಧೆ ಸಾರಮ್ಮ ಹೈಕೋರ್ಟ್‍ನಲ್ಲಿ ದಾವೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಾರಮ್ಮ ಒಬ್ಬಳೇ ಮಗಳನ್ನು ಹೊಂದಿದ್ದು, ಆಕೆ ಪತಿಯೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಆದರೆ ಬಾಬು ಹಾಗೂ ಶೀಜಾ ಅವರು ತಾಲೂಕು ಕಚೇರಿಯ ಅಧಿಕಾರಿಗಳಿಂದ ಸೃಷ್ಟಿಸಿಕೊಂಡಿರುವ ನಕಲಿ ವಂಶವೃಕ್ಷ ಪ್ರಮಾಣ ಪತ್ರದಲ್ಲಿ ಸಾರಮ್ಮನ ಮಗಳ ಹೆಸರಿಲ್ಲ. ಬದಲಿಗೆ ಸಾರಮ್ಮ ತಂದೆ ತಾಯಿ, ಪತಿಯ ಹೆಸರಿನೊಂದಿಗೆ ಸಾರಮ್ಮನ ಮಗನೆಂದು ತನ್ನ ಹೆಸರನ್ನು ಸೇರಿಸಿರುವುದಲ್ಲದೇ ಬಾಬು ಪತ್ನಿ ಶೀಜಾ ಸೇರಿದಂತೆ ತನ್ನಿಬ್ಬರ ಮಕ್ಕಳ ಹೆಸರುಗಳನ್ನು ವಂಶವೃಕ್ಷದಲ್ಲಿ ಸೇರಿಸಿ ನಕಲಿ ದಾಖಲೆಯನ್ನು ಸೃಷ್ಟಿಸಲಾಗಿದೆ ಎಂದು ದೂರಿದ್ದಾರೆ. 

ನನಗೆ ಒಬ್ಬಳೇ ಮಗಳಿದ್ದು, ಆಕೆ ಶಿವಮೊಗ್ಗದಲ್ಲಿ ನೆಲೆಸಿದ್ದಾಳೆ. ನಾನು ಕೂಲಿ ಕೆಲಸ ಮಾಡಿಕೊಂಡು ನರಸಿಂಹರಾಜಪುರ ಪಟ್ಟಣದಲ್ಲಿ ನೆಲೆಸಿದ್ದೆ. ನನ್ನ ಹೆಸರಿನಲ್ಲಿ 1.16 ಎಕರೆ ಜಾಗ ಇದ್ದು, ನನಗೆ ಕೊರೋನಾ ಬಂದಿದ್ದ ವೇಳೆ ಆರೈಕೆಗಾಗಿ ಮಗಳ ಮನೆಗೆ ತೆರಳಿದ್ದೆ. ಈ ವೇಳೆ ನಾನು ಸತ್ತಿದ್ದೇನೆಂದು ನನ್ನ ಕುಟುಂಬದ ಸಂಬಂಧಿಗಳಾದ ಬಾಬು, ಶೀಜಾ ಎಂಬವರು ಮರಣ ಪತ್ರ ಹಾಗೂ ವಂಶವೃಕ್ಷವನ್ನು ನಕಲಿಯಾಗಿ ಸೃಷ್ಟಿಸಿ ನನ್ನ ಜಮೀನು ಕಬಳಿಸಲು ಯತ್ನಿಸಿದ್ದಾರೆ. ಇದನ್ನು ಪ್ರಶ್ನಿಸಿದರೇ ಜೀವಬೆದರಿಕೆ ಹಾಕಿದ್ದಾರೆ. ಈ ದಾಖಲೆಗಳನ್ನು ಪರಿಶೀಲಿಸಿ ತಹಶೀಲ್ದಾರ್ ಅವರು ನನಗೆ ನ್ಯಾಯ ಕೊಡಿಸಬೇಕು. ನಕಲಿ ದಾಖಲೆ ಸೃಷ್ಟಿಸಿದ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸಬೇಕು.

- ಸಾರಮ್ಮ, ನೊಂದ ವೃದ್ಧೆ

ನನ್ನ ತಾಯಿ ಸಹೋದರಿಯ ಮಕ್ಕಳು ಬಾಬು ಅವರಿಗೆ ನಕಲಿ ದಾಖಲೆ ತಯಾರಿಸಲು ಸಹಾಯ ಮಾಡಿದ್ದಾರೆ. ಅಧಿಕಾರಿಗಳು ಹಣ ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿಸಿ ನನ್ನ ತಾಯಿಯ ಹೆಸರಿನಲ್ಲಿರುವ ಜಮೀನು ಕಬಳಿಸಲು ಸಂಚು ಮಾಡಿದ್ದಾರೆ. ನನ್ನ ತಾಯಿಗೆ ಸರಕಾರ ನ್ಯಾಯ ಕೊಡಿಸಬೇಕು.

- ಸಾರಮ್ಮನ ಮಗಳು
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News