ಶಿಕ್ಷಣ ಸಚಿವರು ಆರೆಸೆಸ್ಸ್ ಆಜ್ಞಾ ಪಾಲಕರಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು: ಮಾಜಿ ಸಚಿವ ಡಾ.ಮಹದೇವಪ್ಪ

Update: 2022-02-04 15:01 GMT

ಬೆಂಗಳೂರು, ಫೆ. 4: `ಹೆಣ್ಣು ಮಕ್ಕಳಿಗೆ ಶಿಕ್ಷಣ ಎಂಬ ಶಕ್ತಿಯನ್ನು ತುಂಬಿ ಅವರಲ್ಲಿ ವಿಶ್ವಾಸ ಮೂಡಿಸಬೇಕಾದ ಶಿಕ್ಷಣ ಸಂಸ್ಥೆಗಳು ಅವರನ್ನು ಧರ್ಮದ ಹೆಸರಲ್ಲಿ ಹೀಗೆ ಶಾಲಾ ಆವರಣದಿಂದ ಹೊರಗೆ ಕೂರಿಸಿರುವುದು ಅಸಂವಿಧಾನಿಕವಾದ ಕ್ರಮವಾಗಿದೆ. ಹಿಜಾಬ್ ಧರಿಸುವ ಸಂಗತಿಯು ಕಾನೂನಿನ ವಿಷಯವಲ್ಲ ಎಂಬ ಸಂಗತಿಯನ್ನು ಶಿಕ್ಷಣ ಇಲಾಖೆ ಅರಿಯಲಿ. ಇದರ ಜೊತೆಗೆ ಸಮವಸ್ತ್ರವನ್ನೇ ಧರಿಸಿ ಬಂದಿದ್ದರೂ ಅವರನ್ನು ಹೊರಗೆ ಕೂರಿಸುವಷ್ಟು ಅಹಂಕಾರ ತೋರುತ್ತಿರುವುದು ಏಕೆ?' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, `ಇನ್ನು ಹಿಜಾಬ್(ಸ್ಕಾರ್ಫ್) ಎನ್ನುವುದು ಶಾಲಾ ಆವರಣದಲ್ಲಿ ಆಚರಿಸುವ ಹಿಂದೂ ಹಬ್ಬಗಳು ಮತ್ತು ಪೂಜೆಯಷ್ಟೇ ಸ್ವಾಭಾವಿಕವಾಗಿರುವಂತಹ ಸಂಗತಿ. ಯಾವುದೇ ಮುಸ್ಲಿಂ ಸಂಘಟನೆಗಳಾಗಲೀ ವಿದ್ಯಾರ್ಥಿಗಳಾಗಲೀ ಏಕೆ ಶಾಲಾ ಆವರಣದಲ್ಲಿ ಅನ್ಯ ಧರ್ಮದ ಆಚರಣೆ ಇದೆ ಎಂದು ಪ್ರಶ್ನಿಸಿಲ್ಲ, ಶಾಲೆಯಲ್ಲಿ ಗಣಪತಿ ಕೂರಿಸಿದಾಗ ಬಂದು ರೋಜಾ ಪ್ರಾರ್ಥನೆ ಮಾಡಿಲ್ಲ, ರಕ್ಷಾ ಬಂಧನಕ್ಕೆ ಎದುರಾಗಿ ಬಕ್ರೀದ್ ಆಚರಿಸಿಲ್ಲ, ಸರಸ್ವತಿ ಪೂಜೆಗೆ ವಿರುದ್ಧವಾಗಿ ನಮಾಜ್ ಮಾಡಲು ಹೊರಟಿಲ್ಲ' ಎಂದು ಸ್ಪಷ್ಟಣೆ ನೀಡಿದ್ದಾರೆ.

`ಇಷ್ಟೆಲ್ಲಾ ಸಾಮರಸ್ಯದ ವಾತಾವರಣ ಇದ್ದರೂ ಹಿಜಾಬ್ ಎಂಬ ಸಹ ಸಂಗತಿಗೆ ಎದುರಾಗಿ ಶಾಲಾ ಆವರಣದಲ್ಲಿ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ದ್ವೇಷದ ಸ್ಪರ್ಧೆಗೆ ಬಿದ್ದವರಂತೆ ಆಡುತ್ತಿರುವುದನ್ನು ನೋಡಿದರೆ ಆ ಭಾಗದಲ್ಲಿ ಕೋಮುದ್ವೇಷದ ವಿಷ ಮಕ್ಕಳನ್ನು ಎಷ್ಟರ ಮಟ್ಟಿಗೆ ಅಸಂವಿಧಾನಿಕ ಮಾರ್ಗದಲ್ಲಿ ಹೋಗುವಂತೆ ಪ್ರೇರೇಪಿಸುತ್ತಿದೆಯಲ್ಲಾ ಎಂದೆನಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹೆಣ್ಣು ಮಕ್ಕಳನ್ನು ಓದುವುದಕ್ಕಿಂತ ಮದುವೆ ಮಾಡಿಸುವುದೇ ಸೂಕ್ತ ಎಂಬ ತಿಳುವಳಿಕೆಯು ಇನ್ನೂ ಬಲವಾಗಿರುವ ಸಂದರ್ಭದಲ್ಲಿ ಇಂತಹ ಕೆಟ್ಟ ನಡವಳಿಕೆಗಳು ಅವರನ್ನು ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುತ್ತದೆ' ಎಂದು ಅವರು ಸೂಚಿಸಿದ್ದಾರೆ.

`ಹೆಣ್ಣು ಮಕ್ಕಳೆಂದರೆ ಕೇವಲ ಮನೆಗೆಲಸಕ್ಕೆ ಸೀಮಿತ ಎಂದು ತಿಳಿದಿರುವ ಮನುವಾದಿಗಳ ಉದ್ದೇಶವೂ ಅದೇ ಆಗಿರುವುದರಿಂದ ಈ ಹಿಜಾಬ್ ಘಟನೆಯನ್ನೂ ಆ ಸಾಲಿಗೆ ಸೇರಿಸಿ ನೋಡಬಹುದು ಎನಿಸುತ್ತದೆ. ಕೂಡಲೇ ಗೃಹ ಸಚಿವರು ಸಹಜ ಧಾರ್ಮಿಕ ಸೂಕ್ಷ್ಮಗಳನ್ನು ಸರಿಯಾದ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು ಮತ್ತು ಶಿಕ್ಷಣ ಇಲಾಖೆಯ ಸಚಿವರೂ ತಾವು ರಾಜ್ಯ ಸರಕಾರದ ಸಚಿವರೇ ಹೊರತು, ಆರೆಸೆಸ್ಸ್‍ನ ಆಜ್ಞಾಪಾಲಕರಲ್ಲ ಎಂಬ ಸಂಗತಿಯನ್ನು ನೆನಪಿಟ್ಟುಕೊಂಡು ವರ್ತಿಸಬೇಕು!' ಎಂದು ಡಾ.ಎಚ್.ಸಿ.ಮಹದೇವಪ್ಪ ಮಾರ್ಮಿಕವಾಗಿ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News