×
Ad

ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ ಪಠ್ಯ ಪೂರೈಸಿ: ಹೈಕೋರ್ಟ್

Update: 2022-02-04 22:38 IST

ಬೆಂಗಳೂರು, ಫೆ.4: ರಾಜ್ಯದಲ್ಲಿರುವ ಅಂಧ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಇ-ಪಬ್ 3 ಮಾದರಿಯಲ್ಲಿ ಪರಿವರ್ತಿಸಿ, ಮುಂದಿನ ಎರಡು ತಿಂಗಳೊಳಗೆ ಪೂರೈಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ವಿಚಾರಣೆ ವೇಳೆ ಸರಕಾರದ ಪರ ವಕೀಲರು ವಾದ ಮಂಡಿಸಿ, ವಿದ್ಯಾರ್ಥಿಗಳಿಗೆ ರಾಜ್ಯ ಪಠ್ಯಕ್ರಮದ 1ರಿಂದ 10ನೆ ತರಗತಿಯ 132 ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಇ-ಪಬ್ 3 ಮಾದರಿಗೆ ಪರಿವರ್ತಿಸಿ ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ (ಕೆಟಿಬಿಎಸ್) ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ.

ಉಳಿದ 403 ಪುಸ್ತಕಗಳನ್ನು ಪರಿವರ್ತಿಸಿ ಅಪ್‍ಲೋಡ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭ ಆಗುವುದರೊಳಗೆ ಈ ಕಾರ್ಯ ಪೂರ್ಣಗೊಳಿಸಲಾಗುವುದು. ಅದಕ್ಕಾಗಿ ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು. 

ವಕೀಲರ ವಾದ ಆಲಿಸಿದ ನ್ಯಾಯಪೀಠ, ಪಠ್ಯಪುಸ್ತಕಗಳನ್ನು ಪರಿವರ್ತಿಸಲು ಅಷ್ಟೊಂದು ಸಮಯ ನೀಡಲಾಗದು. ಎರಡು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಿ ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪೂರೈಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಎ.4ಕ್ಕೆ ಮುಂದೂಡಿತು.

ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಅಂಧ(ದೃಷ್ಟಿ ಚೇತನರು) ವಿದ್ಯಾರ್ಥಿಗಳ ಸಮೀಕ್ಷೆ ನಡೆಸಲಾಗಿದ್ದು, ಒಟ್ಟು 1,692 ಅಂಧ ವಿದ್ಯಾರ್ಥಿಗಳಿದ್ದಾರೆ. ಸರಕಾರಿ ಶಾಲೆಗಳಲ್ಲಿ 145, ಅನುದಾನರಹಿತ ಶಾಲೆಗಳಲ್ಲಿ 533 ಮತ್ತು ಖಾಸಗಿ ಶಾಲೆಗಳಲ್ಲಿ 1,014 ವಿದ್ಯಾರ್ಥಿಗಳಿದ್ದಾರೆ ಎಂದು ಸರಕಾರಿ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News