ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧದ ವಿರುದ್ಧ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ
ಕಲುಬುರಗಿ, ಫೆ.5: ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದಕ್ಕೆ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ಕಲಬುರಗಿಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಶಾಸಕಿ ಕನೀಝ್ ಫಾತಿಮಾ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಲಬುರಗಿ ನಗರದ ನ್ಯಾಶನಲ್ ಕಾಲೇಜ್, ಅಲ್ ಬದ್ರ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಭಾಗವಹಿಸಿದ್ದರು. 'ಹಿಜಾಬ್ ನಮ್ಮ ಹಕ್ಕು. ಇದನ್ನು ಧರಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ'. 'ನಮಗೆ ನ್ಯಾಯ ಕೊಡಿ' ಎಂದು ವಿದ್ಯಾರ್ಥಿನಿಯರು ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಕನೀಝ್ ಫಾತಿಮಾ, ನಾನು ಹಿಜಾಬ್ ಧರಿಸಿಯೇ ವಿಧಾನ ಸಭೆ ಪ್ರವೇಶಿಸುತ್ತೇನೆ. ಯಾರಿಗಾದರೂ ತಾಕತ್ತಿದ್ದರೆ ತಡೆಯಲಿ ಎಂದು ಸವಾಲೆಸೆದಿದ್ದು, ಹಿಜಾಬ್, ಬುರ್ಖಾ ಧರಿಸುವುದು ನಮ್ಮ ಹಕ್ಕು. ಇದರಿಂದ ನಮ್ಮನ್ನು ತಡೆಯಲಾಗದು. ಸಾಂವಿಧಾನಿಕವಾಗಿಯೂ ಇದಕ್ಕೆ ಅವಕಾಶ ಇದೆ ಎಂದರು.
ವಿಧಾನ ಸೌಧದಲ್ಲೂ ಹಿಜಾಬ್ ವಿಚಾರವನ್ನು ಪ್ರಸ್ತಾಪ ಮಾಡಲಿದ್ದೇನೆ. ಈ ವಿಚಾರವಾಗಿ ಮುಖ್ಯಮಂತ್ರಿಗೂ ಮನವಿ ಸಲ್ಲಿಸಿದ್ದೇವೆ. ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧದ ವಿರುದ್ಧದ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಫರಾಝ್ ಉಲ್ ಇಸ್ಲಾಂ, ಮಝಹರ್ ಆಲಂ ಖಾನ್, ನ್ಯಾಯವಾದಿ ವಹಾಝ್ ಬಾಬಾ, ಮಹಾನ ನಗರ ಪಾಲಿಕೆಯ ಸದಸ್ಯರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮಹಿಳಾ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.