`ಹಿಜಾಬ್' ಸಮಾಜ ಒಡೆಯುವ ಕುತಂತ್ರವನ್ನು ಸಹಿಸಲು ಸಾಧ್ಯವಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಬೆಂಗಳೂರು, ಫೆ. 5: `ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್(ಸ್ಕಾರ್ಫ್) ಹೆಸರಲ್ಲಿ ಧರ್ಮಾಂಧತೆ ಮಾಡುವುದಕ್ಕೆ ತಮ್ಮ ವಿರೋಧವಿದ್ದು, ಸಮಾಜ ಒಡೆಯುವ ಕುತಂತ್ರವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ' ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಒಂದೂವರೆ ವರ್ಷದಿಂದ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಶಾಲಾ ಸಮವಸ್ತ್ರ ಧರಿಸಿ ಬರಬೇಕೆಂಬ ನಿಯಮವಿದೆ. ಆದರೆ, ಹಿಜಾಬ್(ಸ್ಕಾರ್ಫ್) ಹೆಸರಿನಲ್ಲಿ ಹೊರಗಿನ ಮತಾಂಧ ಶಕ್ತಿಗಳು ಮಾಡುತ್ತಿರುವ ಕುತಂತ್ರವಿದು' ಎಂದು ಆರೋಪಿಸಿದರು.
`ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಸ್ಪಷ್ಟತೆ ಇದೆ. ಯಾವ ಗೊಂದಲವೂ ಇಲ್ಲ. ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ಹೆಸರಲ್ಲಿ ಧಮಾರ್ಂಧತೆ ಮಾಡುವುದನ್ನು ವಿರೋಧ ಮಾಡುತ್ತೇವೆ. ಕೇಸರಿ ವಿಚಾರದಲ್ಲಿ ಆಗಲಿ, ಹಿಜಾಬ್ ವಿಚಾರದಲ್ಲಿ ಆಗಲಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಗೊಂದಲ ಇರಬಾರದು. ಅದು ಸರಿಯಾ? ಇದು ಸರಿಯಾ? ಎಂಬುದು ಪ್ರಶ್ನೆಯಲ್ಲ. ಒಂದು ತಪ್ಪಾದರೆ, ಇನ್ನೊಂದೂ ತಪ್ಪಲ್ಲವೇ?' ಎಂದು ಅವರು ಹೇಳಿದರು.
`ಹಿಜಾಬ್ ವಿಚಾರದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರಿಸ್ಥಿತಿ ತಿಳಿಗೊಳಿಸುವುದನ್ನು ಬಿಟ್ಟು, ಮತಗಳ ಮೇಲೆ ಕಣ್ಣಿಟ್ಟು ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯ ಸರಕಾರವನ್ನು ಚುಚ್ಚುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮನಸ್ಸಲ್ಲೂ ಹಿಜಾಬ್ ಧರಿಸಿ ಶಾಲೆಗೆ ಬರುವುದು ತಪ್ಪು ಎಂಬ ಭಾವನೆ ಇರಬಹುದು. ಸರಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಕಾರಣಕ್ಕೆ ಇಂಥ ಬೆಳವಣಿಗೆಗಳು ನಡೆದಿವೆ' ಎಂದು ಅವರು ದೂರಿದರು.
`ಕಾಶ್ಮೀರದಲ್ಲಿಯೂ ಇಂತಹ ಚರ್ಚೆ ಆಗಬೇಕು, ದೇಶದ ಭದ್ರತೆಗೆ ತೊಂದರೆ ಆಗಬೇಕೆನ್ನುವ ಹುನ್ನಾರ ಇದರಲ್ಲಿ ಇದೆ. ಧರ್ಮಸೂಕ್ಷ್ಮ ವಿಚಾರಗಳನ್ನು ಮುಂದಿಟ್ಟುಕೊಂಡು ಯಾರೂ ರಾಜಕೀಯ ಮಾಡಬಾರದು. ಶಿಕ್ಷಣ ಸಂಸ್ಥೆಗಳ ನಿಯಮಗಳ ಅನ್ವಯ ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಶಾಲೆಗೆ ಬರಬೇಕು. ಈ ವಿವಾದದ ಹಿಂದೆ ಯಾರಿದ್ದಾರೆಂಬುದನ್ನು ಪತ್ತೆಹಚ್ಚಿ ಅಂತಹ ಗುಂಪುಗಳನ್ನು ಶಿಕ್ಷೆಗೆ ಗುರಿಪಡಿಸಬೇಕು' ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೈಬಿಡುತ್ತಾರೆಂಬುದು ವದಂತಿ
`ಸಚಿವ ಸಂಪುಟದಿಂದ ಕೆಲವರನ್ನ ಕೈಬಿಡುತ್ತಾರೆಂಬ ವದಂತಿ ಹಬ್ಬಿದೆ. ಏಕೆ ಇಂತಹ ಗೊಂದಲ ಸೃಷ್ಟಿಯಾಗುತ್ತಿದೆಯೋ ನನಗಂತೂ ಗೊತ್ತಿಲ್ಲ. ನಾನು ಪಕ್ಷದ ಪರ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ನಾಯಕರು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ'
-ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಸಚಿವ