×
Ad

ಮೌಢ್ಯಾಚರಣೆ ಅಭಿವೃದ್ಧಿಗೆ ಮಾರಕ; ಕೆ.ಶಿ.ಶಶಿಧರ್

Update: 2022-02-05 17:53 IST

ಹೊಸದುರ್ಗ, ಫೆ.5: ಮೌಢ್ಯಾಚರಣೆಯು ವೈಯಕ್ತಿಕ ಹಾಗೂ ಕುಟುಂಬದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಕೆ.ಸಿ.ಶಶಿಧರ್ ಎಚ್ಚರಿಕೆ ನೀಡಿದರು.

ತಾಲೂಕಿನ ಕಂಚೀಪುರ ಸಮೀಪದ ಅಜ್ಜಯ್ಯನಹಟ್ಟಿ ಗ್ರಾಮದಲ್ಲಿ ತಾಲೂಕು ಹಿಂದುಳಿದ ಕಲ್ಯಾಣ ಇಲಾಖೆಯಿಂದ ಶುಕ್ರವಾರ ನಡೆದ ಗೊಲ್ಲ ಸಮುದಾಯದ ಕಾಲೋನಿಗಳಲ್ಲಿ ಮೌಢ್ಯ ನಿವಾರಣೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮೂಢನಂಬಿಕೆ ಆಚರಣೆಗೆ ಒಳಗಾಗಿ ಅಂತ ಯಾವ ದೇವರು ಹೇಳಿಲ್ಲ. ಈ ಸತ್ಯವನ್ನು ಗೊಲ್ಲರಹಟ್ಟಿಯ ಸ್ತ್ರೀ-ಪುರುಷರಿಬ್ಬರೂ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ನಗರಗಳಲ್ಲಿ ಇಂತಹ ಮುಟ್ಟುಮೈಲಿಗೆಯಂತಹ ಮೌಢ್ಯತೆ ದೂರಾಗುತ್ತಿದೆ. ತಮ್ಮ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ವೈಜ್ಞಾನಿಕವಾಗಿ ಚಿಂತನೆ ಮಾಡಬೇಕು. ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಹತ್ತಿರವಾದದ್ದನ್ನು ತಪ್ಪದೇ ಪಾಲಿಸಬೇಕು. ಸರಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಜ್ಜಂಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಹಲಿಂಗಪ್ಪ ಅವರು ಉಪನ್ಯಾಸ ನೀಡಿ, ಗೊಲ್ಲರಹಟ್ಟಿಗಳಲ್ಲಿ ಮೌಢ್ಯಾಚರಣೆ ದೂರವಾಗಲು ಮಕ್ಕಳಿಗೆ ತಪ್ಪದೇ ಉನ್ನತ ಶಿಕ್ಷಣ ಕೊಡಿಸಬೇಕು. ಬಾಲ್ಯವಿವಾಹ ಸಂಪೂರ್ಣ ನಿರ್ಮೂಲನೆ ಆಗಬೇಕು. ಆಧುನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಸೂತಕ, ಮೈಲಿಗೆಯ ಹಿನ್ನೆಲೆಯಲ್ಲಿ ಮಹಿಳೆಯನ್ನು ಹಟ್ಟಿಯಿಂದ ಹೊರಗಿಡುವ ಪ್ರವೃತ್ತಿ ಬಿಡಬೇಕು. ನಗರಗಳಲ್ಲಿ ಮುಂದುವರೆದ ಜನಾಂಗಗಳು ಮೌಢ್ಯಾಚರಣೆಗೆ ಒಳಗಾಗಿಲ್ಲ. ಆ ಜನಾಂಗದ ಜೊತೆಗೆ ನಾವು ಜೀವಿಸುತ್ತಿದ್ದು ತಮ್ಮ ಪ್ರಗತಿಗೆ ಮೌಢ್ಯಾಚರಣೆಯಿಂದ ಮುಕ್ತರಾಗಬೇಕು ಎಂದು ವಿವರಿಸಿದರು. 

ಗ್ರಾಮ ಪಂಚಾಯಿತಿ ಸದಸ್ಯರಾದ ಮಾರಪ್ಪ, ಜಯಣ್ಣ, ಕರಿಯಮ್ಮ, ಗ್ರಾಪಂ ಸದಸ್ಯ ಉಮೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ ವೀರೇಶ್, ಪವನ್‍ಕುಮಾರ್, ತಿಪ್ಪೇಶ್, ಗೋವಿಂದ್, ಮುದ್ದುರಾಜು, ರಘು, ಕಲ್ಲೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News