ಗಣಿಗಾರಿಕೆಗೆ ಕೊಟ್ಟಿರುವ ಎನ್‍ಒಸಿ ವಾಪಸ್ ಪಡೆಯಿರಿ: ಶಾಸಕ ಗೂಳಿಹಟ್ಟಿ ಶೇಖರ್ ಸೂಚನೆ

Update: 2022-02-05 12:25 GMT

ಹೊಸದುರ್ಗ, ಫೆ.5: ತಾಲೂಕಿನ ಕಪ್ಪನಾಯಕನಹಳ್ಳಿ, ಮಲ್ಲಾಪುರ, ಕೆಂಕೆರೆ ಸರ್ವೇ ನಂಬರ್‍ನಲ್ಲಿ ಗಣಿಗಾರಿಕೆ(ಮೈನಿಂಗ್) ಮಾಡಲು ಸರಕಾರದಿಂದ ಕೊಟ್ಟಿರುವ ಎನ್‍ಒಸಿಯನ್ನು ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಿ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ತಹಶೀಲ್ದಾರ್ ಮಲ್ಲಿಕಾರ್ಜುನ್ ಅವರಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಬಗರ್‍ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಮ್ಮ ತಾಲೂಕಿನಲ್ಲಿ ಗಣಿಗಾರಿಕೆ ಮಾಡಲು ಸರಕಾರದಿಂದ ಕೆಲವರು ಎನ್‍ಒಸಿ ಪಡೆದಿದ್ದಾರೆ. ಈ ಜಾಗದಲ್ಲಿ ಗಣಿಗಾರಿಕೆ ಚಟುವಟಿಕೆ ಮಾಡುತ್ತಿಲ್ಲ. ಎನ್‍ಒಸಿ ಪಡೆದಿರುವವರು ರೈತರನ್ನು ಒಕ್ಕಲೆಬ್ಬಿಸಿ ಕೋಟ್ಯಂತರ ಹಣ ಮಾಡಿಕೊಂಡು ಹೋಗುತ್ತಾರೆ. ಮದ್ರಾಸ್ ಸಿಮೆಂಟ್ ಕಂಪನಿಯವರು ರೈತರನ್ನು ಒಕ್ಕಲೆಬ್ಬಿಸಿದ್ದಾರೆ. ಇದರಿಂದ ನೂರಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ರೈತರ ಹಿತ ಕಾಪಾಡಲು ಗಣಿಗಾರಿಕೆಗೆ ಕೊಟ್ಟಿರುವ ಎನ್‍ಒಸಿಯನ್ನು ತುರ್ತಾಗಿ ಹಿಂಪಡೆಯುವಂತೆ ಕ್ರಮಕೈಗೊಳ್ಳಬೇಕು ಎಂದು ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹಲವು ವರ್ಷಗಳಿಂದ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೂರಾರು ಎಕರೆ ಜಮೀನು ಸಾಗುವಳಿ ಮಾಡಿಕೊಂಡು ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಆದರೆ ಈ ಬಾರಿ ಜಲಾಶಯದಲ್ಲಿ 126 ಅಡಿ ನೀರು ಸಂಗ್ರಹ ಆಗಿದ್ದರಿಂದ ಹಿನ್ನೀರು ಪ್ರದೇಶದಲ್ಲಿ ನೀರು ಹೆಚ್ಚಾಗಿದ್ದರಿಂದ ಸಾಗುವಳಿ ಜಮೀನು ಕಳೆದುಕೊಂಡು ರೈತರು ಬೀದಿಪಾಲಾಗಿದ್ದಾರೆ. ಅಂತಹ ರೈತರಿಗೆ ಪರ್ಯಾಯವಾಗಿ ಜಮೀನು ಕೊಡಲು ಸರಕಾರಿ ಜಾಗದಲ್ಲಿ ಗಣಿಗಾರಿಕೆಗೆ ಕೊಟ್ಟಿರುವ ಎನ್‍ಒಸಿ ವಾಪಸ್ ಪಡೆದಲ್ಲಿ ಸಹಕಾರಿಯಾಗಲಿದೆ. ಈ ಬಗ್ಗೆ ತುರ್ತಾಗಿ ಸ್ಥಳ ತನಿಖೆ ಮಾಡಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.

ಬಗರ್ ಹುಕುಂ ಸಾಗುವಳಿ ಪತ್ರಕ್ಕೆ ತಾಲೂಕಿನಲ್ಲಿ 124 ಅರ್ಜಿಗಳು ಸಲ್ಲಿಕೆಯಾಗಿದ್ದು, ಇನ್ನೊಂದು ವಾರದೊಳಗೆ 115 ಅರ್ಜಿದಾರರಿಗೆ ಸಾಗುವಳಿ ಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಹಿಂದೆ ಸರಕಾರದಿಂದ ಜಮೀನು ಮಂಜೂರಾಗಿದ್ದು ಫಲಾನುಭವಿಗಳು ಜಮೀನಿಗೆ ಕಂದಾಯ ಪಾವತಿಸದಿದ್ದರಿಂದ ಆ ಜಮೀನು ಸರಕಾರಿ ಪಡಾ ಆಗಿ ಪರಿವರ್ತನೆಯಾಗಿದೆ. ಇದರಿಂದ ಫಲಾನುಭವಿಗಳು ಜಮೀನಿನ ಹಕ್ಕು ಕಳೆದುಕೊಂಡಂತಾಗಿದೆ. ರೈತರ ಅನುಕೂಲಕ್ಕಾಗಿ ಸರಕಾರಿ ಪಡಾ ಸಕ್ರಮಗೊಳಿಸುವಂತೆ ಮುಂಬರುವ ಅಧಿವೇಶನದಲ್ಲಿ ಪ್ರಶ್ನಿಸುವೆ ಎಂದು ಭರವಸೆ ನೀಡಿದರು. 

ಸಭೆಯಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್, ಶಾಸಕರ ಆಪ್ತ ಸಹಾಯಕ ಮಂಜುನಾಥ್, ಬಗರ್‍ಹುಕುಂ ಸಮಿತಿ ಸದಸ್ಯರು, ಸರ್ವೇ, ಕಂದಾಯ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News