×
Ad

ಚಿಕ್ಕಮಗಳೂರು ನಗರಕ್ಕೂ ಕಾಲಿಟ್ಟ ಹಿಜಾಬ್- ಕೇಸರಿ ಶಾಲು ವಿವಾದ

Update: 2022-02-05 20:02 IST
ಕಾಲೇಜಿನ ಆವರಣದಲ್ಲಿ ಕೇಸರಿಶಾಲು ಧರಿಸಿದ ವಿದ್ಯಾರ್ಥಿಗಳು 

ಚಿಕ್ಕಮಗಳೂರು, ಫೆ.5: ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದನ್ನು ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಕೇಸರಿಶಾಲು ಧರಿಸಿ ಕಾಲೇಜಿ ಗೆ ಬರುತ್ತಿರುವ ಪ್ರಕರಣ ರಾಜ್ಯಾದ್ಯಂತ ವ್ಯಾಪಿಸುತ್ತಿದ್ದು, ಈ ವಿವಾದ ಸದ್ಯ ಕಾಫಿನಾಡಿಗೂ ಕಾಲಿಟ್ಟಿದೆ.

ಶನಿವಾರ ನಗರದ ಐಡಿಎಸ್‍ಜಿ ಕಾಲೇಜಿನ  ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರುವುದನ್ನು ವಿರೋಧಿಸಿ ಕೆಲ ವಿದ್ಯಾರ್ಥಿಗಳು ಕೇಸರಿಶಾಲು ಧರಿಸಿ ಕಾಲೇಜಿಗೆ ಬಂದು ಪ್ರತಿಭಟನೆ ನಡೆಸಿದರೇ, ಇದಕ್ಕೆ ಪ್ರತಿಯಾಗಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಶನಿವಾರ ಬೆಳಗ್ಗೆ ಕಾಲೇಜು ಆವರಣದಲ್ಲಿ ಕೆಲ ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಿಸಲು ಅವಕಾಶ ನೀಡಬಾರದು, ಏಕ ವಸ್ತ್ರಸಂಹಿತೆ ಪಾಲಿಸಬೇಕು. ಇಲ್ಲವೇ ನಮಗೂ ಕೇಸರಿಶಾಲು ಧರಿಸಲು ಅವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಇದೇ ವೇಳೆ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಕೆಲವು ವಿದ್ಯಾರ್ಥಿನಿಯರೂ ಪ್ರತಿಭಟನೆ ನಡೆಸಿದರು.

ವಿಚಾರ ತಿಳಿಯತ್ತಿದ್ದಂತೆ ಪ್ರಾಂಶುಪಾಲ ರಾಜಣ್ಣ, ಪ್ರತಿಭಟನಾನಿರತ ವಿದ್ಯಾರ್ಥಿಗಳಿಂದ  ಮನವಿ ಪತ್ರ ಪಡೆದು ಕೊಂಡು, ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಆಡಳಿತ ಮಂಡಳಿ, ಅಧ್ಯಾಪಕರ ಸಭೆ ನಡೆಸಿ ಮುಂದಿನ ಕ್ರಮವಹಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನಾನಿರತ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

ಈ ಹಿಂದೆಯೂ ಉದ್ಭವಿಸಿದ್ದ ಹಿಜಾಬ್ ವಿವಾದ ಪೋಷಕರ ಸಭೆ ಬಳಿಕ ಸುಖಾಂತ್ಯ ಕಂಡಿತ್ತು:

ಕಾರಾವಳಿ ಭಾಗದಲ್ಲಿ ಹಿಜಾಬ್ ವಿವಾದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚಿಕ್ಕಮಗ ಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಬಾಳಗಡಿಯಲ್ಲಿರುವ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕೇಸರಿಶಾಲು ತೊಟ್ಟು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರುವುದಾದರೇ, ನಾವು ಕೇಸರಿಶಾಲು ಧರಿಸಿ ತರಗತಿಗೆ ಬರುತ್ತೇವೆಂದು ಪಟ್ಟು ಹಿಡಿದು ಕೆಲ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜು ಆವರಣಲ್ಲಿ ಧರಣಿ ನಡೆಸಿದ್ದರು. ಆಗ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಮನವಿಯನ್ನು ಆಲಿಸಿ ಕಾಲೇಜು ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ನಡೆಸಿ ಪ್ರಕರಣದ ವಿವಾದಕ್ಕೆ ತೆರೆ ಎಳೆದಿದ್ದರು. ಅಂದಿನಿಂದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದು, ವಿವಾದ ಅಲ್ಲಿಗೆ ತಣ್ಣಗಾಗಿತ್ತು. ಸದ್ಯ ಈ ವಿವಾದ ಚಿಕ್ಕಮಗಳೂರು ನಗರದ ಐಡಿಎಸ್‍ಜಿ ಕಾಲೇಜಿನ ಅಂಗಳ ಪ್ರವೇಶಿಸಿದೆ.

ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ತೆರಳಿ ಎರಡು ಕಡೆಯವರಿಂದ ಮನವಿಯನ್ನು ಪಡೆದುಕೊಂಡಿದ್ದೇನೆ. ಅವರ ಮನವಿಯನ್ನು ಮೇಲಾಧಿಕಾರಿಗಳಿಗೆ ನೀಡಲಾಗಿದೆ. ಆಡಳಿತ ಮಂಡಳಿ, ಅಧ್ಯಾಪಕರು ಸಭೆ ನಡೆಸಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು. ಸೋಮವಾರ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಪೋಷಕರ ಸಭೆ ನಡೆಸಲಾಗುವುದು.

-ರಾಜಣ್ಣ, ಐಡಿಎಸ್‍ಜಿ ಕಾಲೇಜು ಪ್ರಾಂಶುಪಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News