ಹಕ್ಕು ಪತ್ರ ಪಡೆದವರಿಗೆ ನೋಂದಣಿಗೆ ಕ್ರಮ: ಕಂದಾಯ ಸಚಿವ ಆರ್.ಅಶೋಕ್

Update: 2022-02-05 15:15 GMT

ಬೆಂಗಳೂರು, ಫೆ. 5: `ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಕಲಂ `94-ಸಿ' ಮತ್ತು `94 ಸಿಸಿ' ಅಡಿಯಲ್ಲಿ ಅರ್ಜಿ ಹಾಕಿರುವ ಬಡವರ ಹಕ್ಕುಪತ್ರಗಳನ್ನು ನೋಂದಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದ್ಯತೆಯ ಮೇಲೆ ಇದನ್ನು ಮಾಡಲಿದ್ದು, ಎಲ್ಲ ದಾಖಲೆಗಳು ಅವರಿಗೆ ಸಿಗುವಂತಾಗಬೇಕು' ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾತನಾಡಿದ ಅವರು, `ಬಡವರಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಸರಕಾರದಿಂದ ನಿವೇಶನ ನೀಡಲಾಗಿತ್ತು. ಲಕ್ಷಾಂತರ ಜನರಿಗೆ ಹಕ್ಕುಪತ್ರ ನೀಡಲಾಗಿತ್ತು. ಜನರಿಗೆ ನಿವೇಶನವನ್ನು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಲು, ಕಾವೇರಿ ತಂತ್ರಾಂಶದಲ್ಲಿ `ಹಕ್ಕುಪತ್ರ' ಎಂದು ಆಯ್ಕೆ ಮಾಡಲು ಅವಕಾಶ ಇರಲಿಲ್ಲ. ಹಾಗಾಗಿ ನೋಂದಣಿ ಆಗದೇ ಇರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಆದುದರಿಂದ ಮೇಲ್ಕಂಡ ಕ್ರಮಕ್ಕೆ ಸೂಚಿಸಿದ್ದೇನೆ' ಎಂದರು. 

`ಸರಕಾರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂರಹಿತರು, ಸಣ್ಣ ರೈತರುಗಳ ಜಮೀನನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕೆಲವು ರೈತರು ನಮೂನೆ-50, ನಮೂನೆ-57ರಲ್ಲಿ ಅರ್ಜಿ ಸಲ್ಲಿಸದೇ ಇರುವವರಿಗೆ ಮತ್ತೊಂದು ಅವಕಾಶವನ್ನು ನೀಡಬೇಕೆಂದು ಮನವಿ ಬಂದಿದೆ. ಹಾಗಾಗಿ ಇನ್ನೂ ಒಂದು ವರ್ಷದ ಅವಧಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ' ಎಂದು ಅಶೋಕ್ ಹೇಳಿದರು.

`ಈ ಹಿಂದೆ ಇದ್ದ ನಿಯಮ ಬದಲಾವಣೆ ಮಾಡಿ, ಕಠಿಣ ನಿಯಮ ಜಾರಿಗೆ ತರಲಾಗುತ್ತದೆ. ಸರಕಾರಿ ಜಮೀನು ಅರ್ಹರಿಗೆ ಸಿಗಬೇಕು. ಯಾವ ರೈತರು ಸಾಗುವಳಿ ಮಾಡುತ್ತಿದ್ದಾರೆ, ಆ ಜಮೀನು ಮುಟ್ಟುವಂತಿಲ್ಲ. ಸಾಗುವಳಿ ಮಾಡುತ್ತಿರುವ ರೈತರಿಗೇ ಅದನ್ನು ಕೊಡುವುದು. ಮಠ-ಮಾನ್ಯಗಳು, ಸಂಸ್ಥೆ, ಟ್ರಸ್ಟ್ ಇವುಗಳಿಗೆ ನೀಡುವಾಗ ಪರಾಮರ್ಶೆ ನಡೆಸಬೇಕು. ಟ್ರಸ್ಟ್ ನೋಂದಣಿಯಾಗಿ ಎಷ್ಟು ವರ್ಷ ಆಗಿರಬೇಕು, ಅದರ ಕೆಲಸ ಕಾರ್ಯಗಳೇನು, ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದೆಯೆ ಈ ಎಲ್ಲ ವಿಚಾರ ತಿಳಿದು ಭೂಮಿ ನೀಡಬೇಕು. ಅನರ್ಹರಿಗೆ ಸರಕಾರಿ ಜಾಗ ಸಿಗದಂತೆ ನೀತಿ ನಿಯಮ ರೂಪಿಸುವುದು, ಬೆಲೆ ನಿಗದಿ ಮಾಡುವುದು ನಮ್ಮ ಸಮಿತಿಯ ಕೆಲಸ ಎಂದು ಅಶೋಕ್ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News