ಚಾಮರಾಜನಗರ: ಒಂದೇ ಕುಟುಂಬದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು!

Update: 2022-02-05 16:26 GMT

ಚಾಮರಾಜನಗರ : ತಾಲೂಕಿನ ಒಂದೇ ಕುಟುಂಬ ಮೂವರು ಸದಸ್ಯರು ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ಗಳಾಗಿ ಯುವ ಸಮೂಹ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ‌.

ಗ್ರಾಮದ ಚಂದ್ರು ಹಾಗೂ ಶಾಂತಮ್ಮ ಎಂಬ ದಂಪತಿಗಳ ಮಕ್ಕಳಾದ ರವಿಕುಮಾರ್, ಸುಗುಣ ಹಾಗೂ ಪ್ರಭು ಎಂಬುವವರೆ ಒಂದೇ ಮನೆಯ ಮೂವರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳು.

ಹಿರಿಯ ಮಗನಾದ ರವಿಕುಮಾರ್ ಪ್ರಸ್ತುತ ಹಾವೇರಿ ಜಿಲ್ಲೆಯ ಶಿಗ್ಗಾವ್‌ನಲ್ಲಿ ರಿಸರ್ವ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲಿ, 8-10  ನೇ ತರಗತಿಯನ್ನು ಬೊಮ್ಮನಹಳ್ಳಿಯಲ್ಲಿ, ತೆರಕಣಾಂಬಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಗುಂಡ್ಲುಪೇಟೆ ಜೆಎಸ್ಎಸ್ ಕಾಲೇಜಿನಲ್ಲಿ ಬಿಎ (ಎಚ್‌ಇಪಿ), ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂಎ (ಅರ್ಥಶಾಸ್ತ್ರ) ಮಾಡಿರುವ ಇವರು ಎಂಎ ಓದಿನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನ ಬರೆಯುತ್ತಿದ್ದರಿಂದ ಎಂಎ ಮುಗಿದ ತಕ್ಷಣವೇ 2014-15  ರಲ್ಲಿ ಸಿಪಿಸಿಯಾಗಿ ಮೈಸೂರಿನ ನಗರಕ್ಕೆ ಆಯ್ಕೆ ಕರ್ತವ್ಯ ನಿರ್ವಹಿಸುತ್ತಾ 2018-19  ನೇ ಸಾಲಿನಲ್ಲಿ ರಿಸರ್ವ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾದ ರವಿಕುಮಾರ್ ಪ್ರಸ್ತುತ ಹಾವೇರಿ ಜಿಲ್ಲೆಯ ಶಿಗ್ಗಾವ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ದಂಪತಿಗಳ ಮೂರನೇ ಮಗನಾದ ಪ್ರಭು ಕೂಡಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಪ್ರೌಢಶಿಕ್ಷಣವನ್ನು ಗುಂಡ್ಲುಪೇಟೆಯ ಜೆಎಸ್ಎಸ್ ಶಾಲೆಯಲ್ಲಿ, ಪಿಯುಸಿ (ಕಾಮರ್ಸ್) ಯನ್ನು ದೊಡ್ಡುಂಡಿ ಭೋಗಪ್ಪ ಕಾಲೇಜಿನಲ್ಲಿ, ಪದವಿ ಶಿಕ್ಷಣ(ಬಿಕಾಂ) ವನ್ನು ಮೈಸೂರಿನ ಮಹಾಜನ ಕಾಲೇಜಿನಲ್ಲಿ ಮುಗಿಸುತ್ತಲೇ ತನ್ನ 22 ನೇ ವಯಸ್ಸಿಗೆ ಸಿವಿಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗಿ ಪ್ರಸ್ತುತ ಕಲಬುರ್ಗಿಯಲ್ಲಿ ತರಬೇತಿ ಪಡೆಯುತ್ತಿದ್ದು, ಮುಂದಿನ ತಿಂಗಳಲ್ಲಿ ಮೈಸೂರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಎರಡನೇ ಮಗಳಾದ ಸುಗುಣ ಸಹ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ, ಪ್ರೌಢಶಿಕ್ಷಣವನ್ನು ಬೊಮ್ಮನಹಳ್ಳಿಯಲ್ಲಿ, ಪಿಯುಸಿಯನ್ನು ತೆರಕಣಾಂಬಿಯ ಪದವಿ ಪೂರ್ವ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ ಇವರು, ಮೈಸೂರಿನಲ್ಲಿ ಎರಡು ವರ್ಷಗಳ ಕಾಲ ಗ್ರಂಥಾಲಯದಲ್ಲಿ ಸತತವಾಗಿ ಓದಿಕೊಂಡು, ನಂತರ ಅಣ್ಣ ಹಾಗೂ ತಮ್ಮನಿಂದ ಒಂದಷ್ಟು ಮಾರ್ಗದರ್ಶನವನ್ನು ಪಡೆದು 2020-21 ನೇ ಸಾಲಿನ ಪಿಎಸ್ಐ ಪರೀಕ್ಷೆಯಲ್ಲಿ 94 ನೇ ರ್ಯಾಂಕ್ ಪಡೆದು ಬೆಂಗಳೂರಿಗೆ ಆಯ್ಕೆಯಾಗಿದ್ದಾರೆ‌.

ಇವರು ಕೂಡಾ ಪದವಿ ಶಿಕ್ಷಣ ಮುಗಿಸಿ ನಂತರ ತಲಾ ಎರಡು ಬಾರಿ ಎಫ್‌ಡಿಎ, ಎಸ್‌‌ಡಿಎ ಹಾಗೂ ಪಿಎಸ್ಐ ಪರೀಕ್ಷೆ ಬರೆದಿದ್ದಾರೆ. ಕೊನೆಗೆ 2020-21 ನೇ ಸಾಲಿನಲ್ಲಿ ಮೂರನೇ ಬಾರಿಗೆ ಬರೆದ ಪಿಎಸ್ಐ ಪರೀಕ್ಷೆಯಲ್ಲಿ 94 ನೇ ರ್ಯಾಂಕ್ ಪಡೆದು ಆಯ್ಕೆಯಾದರು.

ಸತತವಾದ ಓದಿಗೆ ತಕ್ಕ ಪ್ರತಿಫಲ

ಒಂದೇ ಕುಟುಂಬದಿಂದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳಾಗಿರುವ ಈ ಮೂವರು ಇಂದಿನ ಯುವಪೀಳಿಗೆಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವ ಸಮೂಹಕ್ಕೆ ಮಾದರಿಯಾಗಿದ್ದು, ಇವರು ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಿದ್ದರು ಎಂಬುದರ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಸದಾಕಾಲ ಓದುವುದರ ಜೊತೆಗೆ ಸತತವಾಗಿ ಪ್ರಯತ್ನ ಪಡುತ್ತಿರಬೇಕು. ಪದವಿ ಶಿಕ್ಷಣದ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪ್ರಯತ್ನ ಮಾಡಿದರೆ ಉತ್ತಮ. ಏಕೆಂದರೆ ಪದವಿ ಮುಗಿದ ತಕ್ಷಣ ಕೆಲಸ ತೆಗದುಕೊಳ್ಳಲೇಬೇಕು ಎಂಬ ಒತ್ತಡ ಬರುವುದರಿಂದ ಪದವಿ ಮುಗಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಕಷ್ಟಕರವಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಂತಹ ಸಮೂಹವು ಯಾವುದೇ ಒತ್ತಡಕ್ಕೆ ಒಳಗಾಗದೇ, ತಮ್ಮ‌ ಛಲವನ್ನು ಬಿಡದೇ ಪರೀಕ್ಷೆಗಳನ್ನು ಎದುರಿಸಬೇಕು.

ಅಲ್ಲದೇ, ಸಮಸ್ಯೆಗಳು ಸಾವಿರಾರು ಬರಬಹುದು ಅದಕ್ಕೆ ತಲೆಕೆಡಿಸಿಕೊಳ್ಳದೇ, ಉತ್ತಮ‌ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪರಿಶ್ರಮ ಪಟ್ಟು ಓದಿದರೆ ಖಂಡಿತವಾಗಿಯೂ ಕೆಲಸ ತೆಗದುಕೊಳ್ಳಬಹುದು ಎನ್ನುತ್ತಾರೆ ಈ ಮೂವರು ಪಿಎಸ್ಐಗಳು.

ನನಗೆ ಕೆಎಎಸ್ ಆಗುವ ಗುರಿಯಿದೆ. ಒಂದು ಬಾರಿ ಪ್ರಯತ್ನವನ್ನು ಸಹ ಮಾಡಿ ಇಂಟರ್‌ವ್ಯೂವರೆಗೂ ಹೋಗಿದ್ದೆ. ಈಗ ಮತ್ತೇ ಕೆಎಎಸ್ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದೇನೆ.

-ರವಿಕುಮಾರ್ ಆರ್‌ಎಸ್‌ಐ

ಅಣ್ಣನ ಮಾರ್ಗದರ್ಶನ, ಸ್ನೇಹಿತರ ಜೊತೆಗಿನ ಓದು ಹಾಗೂ  ಪದವಿ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ ಪರಿಣಾಮ‌ ಪರಿಶ್ರಮ ತಕ್ಕ ಪ್ರತಿಫಲ ದೊರೆತಿದೆ.

-ಪ್ರಭು ಪಿಎಸ್ಐ

ತಾಳ್ಮೆ ಮತ್ತು ಸತತವಾದ ಪ್ರಯತ್ನವಿದ್ದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ. ಆದ್ದರಿಂದ ಸದಾಕಾಲವೂ ಪ್ರಯತ್ನ ಮಾಡುತ್ತಿರಬೇಕು.

-ಸುಗುಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News