ಮಂಡ್ಯ: ಭತ್ತದ ಪೈರಿನಲ್ಲಿ ಮೂಡಿದ ಅಪ್ಪು ಹೆಸರು!
ಮಂಡ್ಯ, ಫೆ.5: ಕೆಲವು ತಿಂಗಳ ಹಿಂದೆ ನಿಧನರಾದ ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್‍ಕುಮಾರ್(ಅಪ್ಪು) ಅವರಿಗೆ ರೈತರೊಬ್ಬರು ವಿಶೇಷವಾದ ರೀತಿಯಲ್ಲಿ ತನ್ನ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ತಾಲೂಕಿನ ಮೊತ್ತಹಳ್ಳಿ ಗ್ರಾಮದ ರೈತ ರಾಜು ಎಂಬುವರು ತನ್ನ ಗದ್ದೆಯಲ್ಲಿ ಭತ್ತದ ಪೈರಿನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಹೆಸರನ್ನು ಬೆಳೆಸಿ ಅರ್ಥಪೂರ್ಣವಾಗಿ ಶ್ರದ್ಧಾಂಜಲಿ ಅರ್ಪಿಸಿದ್ದು, ಸಾಮಾಜಿಕಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
‘ಮತ್ತೆ ಹುಟ್ಟಿಬಾ ಪುನೀತ್ ರಾಜ್‍ಕುಮಾರ್, ಅಪ್ಪು’ ಎಂಬುದಾಗಿ ಭತ್ತದ ಪೈರಿನಲ್ಲಿ ಅಕ್ಷರ ಅರಳಿಸಿರುವ ರಾಜು, ಈ ಹಿಂದೆ ಅಂಬರೀಷ್ ಅವರಿಗೂ ಇದೇ ರೀತಿಯಲ್ಲಿ ನಮನ ಸಲ್ಲಿಸಿ ಗಮನ ಸೆಳೆದಿದ್ದರು.
‘ಪುನೀತ್ ರಾಜ್‍ಕುಮಾರ್ ಉತ್ತಮ ಕಲಾವಿದ ಮಾತ್ರವಲ್ಲದೆ ಸಮಾಜ ಸೇವಕರಾಗಿದ್ದರು. ಹಾಗಾಗಿ ಅವರು ನನಗೆ ತುಂಬಾ ಪ್ರಿಯರು. ಭತ್ತದ ಪೈರಿನಂತೆ ಅವರ ಹೆಸರು ಜೀವಂತವಾಗಿರಬೇಕೆಂದು ಪೈರಿನಲ್ಲಿ ಅವರ ಹೆಸರು ಮೂಡಿಸಿದ್ದೇನೆ’ ಎನ್ನುತ್ತಾರೆ ರಾಜು.