ಹಿಜಾಬ್ ಹಾಕಿಕೊಂಡು ಶಾಲೆಗೆ ಹೋಗುವುದಾದರೆ ಪಾಕಿಸ್ತಾನಕ್ಕೆ ಹೋಗಿ: ಶಾಸಕ ಯತ್ನಾಳ್
ಮೈಸೂರು,ಫೆ.5: ಹಿಜಾಬ್ ಹಾಕಿಕೊಂಡು ಶಾಲೆಗೆ ಹೋಗುವುದಾದರೆ ಪಾಕಿಸ್ತಾನಕ್ಕೆ ಹೋಗಿ, ಈ ನೆಲದಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ಹಿಜಾಬ್ ಕೇಳಿದವರು ನಾಳೆ ಶಾಲೆಯಲ್ಲಿ ಮಸೀದಿ ಬೇಕು ಎನ್ನುತ್ತಾರೆ, ಇದು ಹಿಂದೂ ರಾಷ್ಟ್ರ. ಇಲ್ಲಿ ಗಣಪತಿ ಪೂಜೆ ಸೇರಿದಂತೆ ಹೆಣ್ಣುಮಕ್ಕಳು ಕುಂಕುಮ ಹಾಕಿಕೊಂಡು ಹೋಗುವುದಕ್ಕೆ ಅವಕಾಶವಿದೆ. ಇದನ್ನು ಯಾರು ಪ್ರಶ್ನೆ ಮಾಡುವುದಿಲ್ಲ. ಪ್ರಶ್ನೆ ಮಾಡುವವರು ಪಾಕಿಸ್ತಾನಕ್ಕೆ ಹೋಗಲಿ, ಶಾಲೆಗಳಲ್ಲಿ ಹಿಜಾಬ್ ಬೆಂಬಲಿಸುವವರು ದೇಶ ದ್ರೋಹಿಗಳು. ಈ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ಯತ್ನ ನಡೆಯುತ್ತಿದೆ. ಇಲ್ಲಿ ತಾಲಿಬಾನ್ ಸಂಸ್ಕೃತಿಗೆ ಅವಕಾಶ ಕೊಡುವುದಿಲ್ಲ. ಕರ್ನಾಟಕವನ್ನ ತಾಲಿಬಾನ್ ಮಾಡಲು ಬಿಡುವುದಿಲ್ಲ. ಹಿಜಾಬ್ ಹೋರಾಟದ ಹಿಂದೆ ಉಗ್ರ ಸಂಘಟನೆ ಕೈವಾಡ ಇದೆ ಎಂದು ಯತ್ನಾಳ್ ಆರೋಪಿಸಿದರು.
ಹಿಜಾಬ್ ಬೆಂಬಲಿಸುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‍ನವರು ಹಿಂದೂನಾ?, ಅಥವಾ ಮುಸ್ಲಿಂಗೆ ಮತಾಂತರಗೊಂಡಿದ್ದಾರಾ?. ಪ್ರತಿ ಬಾರಿಯು ಮುಸ್ಲಿಂರನ್ನು ಓಲೈಸುವ ಗುಣ ಹೊಂದಿರುವ ಸಿದ್ದರಾಮಯ್ಯ ಜಾತ್ಯತೀತತೆ ಬಗ್ಗೆ ಮಾತನಾಡುವುದು ಮತಾಂತರವೇ ಎಂದು ಪ್ರಶ್ನೆ ಮಾಡಿದರು.
ಈ ದೇಶದಲ್ಲಿ ಶೇ.15 ರಷ್ಟು ಮುಸ್ಲಿಮರಿದ್ದಾರೆ. ಇವರ ಸಂಖ್ಯೆ 50 ಆದರೆ ಹಿಂದೂಗಳು ಉಳಿಯಲು ಸಾಧ್ಯವೆ?. ಇದನ್ನು ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು. ಈ ದೇಶ ಇಬ್ಭಾಗವಾದಾಗ ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಕೊಟ್ಟಿದ್ದಾರೆ. ನಿಮಗೆ ಈ ಸಂಸ್ಕೃತಿ ಬೇಡವೆಂದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದರು.
ನಾನು ಯಾವುದೇ ಸಚಿವ ಹಾಗೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಒಂದು ವೇಳೆ ಸಿಎಂ ಮಾಡಿದರೆ ಸಮರ್ಥ ಹಾಗೂ ಸಾಧ್ಯವಾದಷ್ಟು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ. ಸದ್ಯಕ್ಕೆ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾದರೆ ಮೇಕೆದಾಟಿನಿಂದ ಕೃಷ್ಣದ ವರೆಗೆ ಚಾಮರಾಜನಗರದಿಂದ ಬೀದರ್ ವರೆಗೆ ಕೆಲಸ ಮಾಡುತ್ತೇನೆ. ಹಿಂದೆ ಮೈಸೂರಿನವರಾದರೆ ಮೈಸೂರಿಗೆ, ಶಿವಮೊಗ್ಗದವರಾದರೆ ಶಿವಮೊಗ್ಗಕ್ಕೆ, ಹಾವೇರಿಯವರಾದರೆ ಹಾವೇರಿಗೆ ಕೆಲಸ ಮಾಡುವ ಸಿಎಂ ತರ ನಾನು ಮಾಡುವುದಿಲ್ಲ ಎಂದು ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿಗೆ ಟಾಂಗ್ ನೀಡಿದರು.