ನಕಲಿ ಆರ್‌ಟಿ-ಪಿಸಿಆರ್ ವರದಿ ದಂಧೆ: ಮೂವರ ಬಂಧನ
ಕೊಲ್ಹಾಪುರ: ಕರ್ನಾಟಕ- ಮಹಾರಾಷ್ಟ್ರ ಗಡಿಯ ಕೊಗ್ನೋಳಿ ಚೆಕ್‌ಪೋಸ್ಟ್‌ನಲ್ಲಿ ಖಾಸಗಿ ಬಸ್ ಪ್ರಯಾಣಿಕರಿಗೆ ನಕಲಿ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಗಳನ್ನು ಸೃಷ್ಟಿಸಿಕೊಡುತ್ತಿದ್ದ ಆರೋಪದಲ್ಲಿ ಮೂರು ಮಂದಿಯನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಆರು ಖಾಸಗಿ ಟ್ರಾವೆಲ್ ಆಪರೇಟರ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕೊಲ್ಹಾಪುರದ ರಾಜಶ್ರೀ ಶಾಹು ಮಹಾರಾಜ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಖಾಸಗಿ ಪ್ರಯೋಗಾಲಯದ ಹೆಸರಿನಲ್ಲಿ ನಕಲಿ ವರದಿ ನೀಡಲಾಗುತ್ತಿತ್ತು.
ಬಂಧಿತರನ್ನು ಕರ್ನಾಟಕದ ಹುಬ್ಬಳ್ಳಿಯ ಸುರೇಶ್ ಮಡಹಳ್ಳಿ, ಸತಾರಾ ಜಿಲ್ಲೆಯ ಸೋಂಗೇಕರವಾಡಿಯ ಸತೀಶ್ ಶಿಂಧೆ ಮತ್ತು ಕರ್ನಾಟಕದ ಚಿತ್ರದುರ್ಗದ ಜಗದೀಶ್ ದೊಡ್ಡಪರಸಪ್ಪ ಎಂದು ಗುರುತಿಸಲಾಗಿದೆ.
ದೊಡ್ಡಪರಸಪ್ಪ, ಖಾಸಗಿ ಬಸ್ಸಿನ ನಿರ್ವಾಹಕ ಮತ್ತು ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಕೊಲ್ಹಾಪುರದ ಖಾಸಗಿ ಬಸ್ ಆಪರೇಟರ್‌ಗಳ ಏಜೆಂಟರು ಮತ್ತು ವ್ಯವಸ್ಥಾಪಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದ್ದು, ಶೀಘ್ರವೇ ಅವರನ್ನೂ ಬಂದಿಸಲಾಗುವುದು ಎಂದು ಮೂಲಗಳು ಹೇಳಿವೆ.
"ಕರ್ನಾಟಕದ ಹುಬ್ಬಳ್ಳಿಗೆ ತೆರಳುವ ಪ್ರಯಾಣಿಕರಂತೆ ನಟಿಸಿ ಕೊಲ್ಹಾಪುರ ಬಸ್ ನಿಲ್ದಾಣಕ್ಕೆ ಮೂರು ಮಂದಿಯನ್ನೊಳಗೊಂಡ ನಮ್ಮ ತಂಡ ತೆರಳಿತ್ತು. ಟಿಕೆಟ್‌ಗಾಗಿ ಬಸ್ ಚಾಲಕರನ್ನು ಕೇಳಿದಾಗ, 500 ರೂಪಾಯಿ ದರದ ಟಿಕೆಟ್‌ಗೆ 1500 ರೂಪಾಯಿ ಕೇಳಿದರು. ಅಷ್ಟೊಂದು ದುಬಾರಿ ಏಕೆ ಎಂದು ಪ್ರಶ್ನಿಸಿದಾಗ, ಕೋವಿಡ್-19 ಪರೀಕ್ಷೆ ನಡೆಸದೇ ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿ ನೀಡುತ್ತೇವೆ ಹಾಗೂ ಕೊಗ್ನೋಳಿ ಚೆಕ್‌ಪೋಸ್ಟ್‌ನಲ್ಲಿ ಕರ್ನಾಟಕ ಪೊಲೀಸರಿಗೆ ಸ್ವಲ್ಪ ಹಣ ನೀಡಬೇಕಾಗುತ್ತದೆ ಎಂದು ಉತ್ತರ ಬಂತು" ಎಂದು ನಿಪ್ಪಾಣಿ ಇನ್‌ಸ್ಪೆಕ್ಟರ್ ಸಂಗಮೇಶ್ ಶಿವಯೋಗಿ ವಿವರಿಸಿದ್ದಾರೆ.
ನಾವು ಹಣ ನೀಡಿದ ಬಳಿಕ 10 ನಿಮಿಷದಲ್ಲಿ ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿ ನೀಡಲಾಯಿತು. ನಾವು ಕೊಗ್ನೋಳಿ ಚೆಕ್‌ಪೋಸ್ಟ್ ತಲುಪಿದ ತಕ್ಷಣ ಕ್ರಮಕ್ಕೆ ಮುಂದಾದೆವು. ಬಸ್ಸಿನಲ್ಲಿ 24 ಮಂದಿಗೆ ಇಂಥ ನಕಲಿ ಆರ್‌ಟಿ-ಪಿಸಿಆರ್ ವರದಿ ನೀಡಿದ್ದು ತನಿಖೆಯಿಂದ ತಿಳಿದು ಬಂತು ಎಂದು ಅವರು ವಿವರಿಸಿದ್ದಾರೆ.