ರಾಹುಲ್ ಗಾಂಧಿ ಸಲಹೆಗಾರ ಕೆ.ರಾಜು ಭೇಟಿಗೆ ವಿಶೇಷ ಅರ್ಥ ಬೇಡ: ಸಿದ್ದರಾಮಯ್ಯ
ಬೆಂಗಳೂರು, ಫೆ. 6: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆಗಾರ ಕೆ.ರಾಜು ಅವರು ತಮ್ಮನ್ನು ಔಪಚಾರಿಕವಾಗಿ ಭೇಟಿ ಮಾಡಿದ್ದು, ಇದಕ್ಕೆ ಯಾವುದೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ರವಿವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಜವಾಬ್ದಾರಿಯನ್ನು ರಾಜು ಅವರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಎಲ್ಲ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.
ಅದೇ ರೀತಿ ನಮ್ಮ ರಾಜ್ಯಕ್ಕೂ ಭೇಟಿ ನೀಡಿ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಕುರಿತು ಪರಿಶೀಲನೆ ನಡೆಸಲು ಅವರು ಬಂದಿದ್ದಾರೆ. ಹೈಕಮಾಂಡ್‍ನಿಂದ ಯಾವುದೆ ಸಂದೇಶವನ್ನು ಹೊತ್ತು ಅವರು ಬಂದಿಲ್ಲ. ಆದುದರಿಂದ, ಅವರ ಭೇಟಿಗೆ ಯಾವುದೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಸಿ.ಎಂ.ಇಬ್ರಾಹೀಂ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿ.ಎಂ.ಇಬ್ರಾಹೀಂ ಪಕ್ಷ ಬಿಡುವುದಿಲ್ಲ. ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ಮಾತನಾಡಿದ್ದಾರೆ ಎಂದರು.
ಪ್ರತಿಪಕ್ಷ ನಾಯಕ ಸ್ಥಾನ ಕೈ ತಪ್ಪಿರುವುದರಿಂದ ಕೋಪಗೊಂಡಿದ್ದಾರೆ. ಅವರ ಕೋಪ ಸ್ವಲ್ಪ ಕಡಿಮೆ ಆಗಲಿ, ಆನಂತರ ಹೋಗಿ ಅವರನ್ನು ಭೇಟಿಯಾಗುತ್ತೇನೆ. ಅವರು ನನ್ನ ಸ್ನೇಹಿತ, ಪಕ್ಷ ಬಿಟ್ಟು ಅವರು ಎಲ್ಲೂ ಹೋಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.
1995ರಲ್ಲಿ ನಾನು ಕಾಂಗ್ರೆಸ್ ಪಕ್ಷದಲ್ಲಿ ಇರಲಿಲ್ಲ. ಆದುದರಿಂದ, ನನಗೆ ಆಗಿನ ಕಾಂಗ್ರೆಸ್ ಪಕ್ಷದ ಬಗ್ಗೆ ಗೊತ್ತಿಲ್ಲ. ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲ್ ಅವರೊಂದಿಗೆ ಇಬ್ರಾಹೀಂ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರು. ಆನಂತರ ಜನತಾ ದಳಕ್ಕೆ ಬಂದರು. ಅಲ್ಲಿಂದಲೇ ನನಗೆ ಅವರ ಪರಿಚಯ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.