ಚಿಕ್ಕಮಗಳೂರು: ಐಡಿಎಸ್ ಜಿ ಕಾಲೇಜು ಆವರಣದಲ್ಲಿ ಜೈಭೀಮ್ v/s ಜೈ ಶ್ರೀರಾಮ್ ಘೋಷಣೆ
ಚಿಕ್ಕಮಗಳೂರು: ಹಿಜಾಬ್ ವಿರೋಧಿಸಿ ಕೆಲವು ವಿದ್ಯಾರ್ಥಿಗಳು ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ನಡೆಸಿದ ಪ್ರತಿಭಟನೆಗೆ ವಿರುದ್ಧವಾಗಿ ದಲಿತ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಬೆಂಬಲಿಸಿ ನೀಲಿ ಶಾಲು ದರಿಸಿ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ಕಾಲೇಜು ಆವರಣದಲ್ಲಿ ನಡೆದಿದೆ.
ಸೋಮವಾರ ನೀಲಿ ಶಲ್ಯಗಳೊಂದಿಗೆ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿ ಸಂಘಪರಿವಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಇದನ್ನೂ ಓದಿ: ವಿಜಯಪುರ: ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು; ಇಂಡಿ ಪಟ್ಟಣದ ಕಾಲೇಜಿಗೆ ರಜೆ ಘೋಷಣೆ
ಹಿಜಾಬ್ ವಿರುದ್ಧ ಕೆಲ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದ್ದು, ಸಮುದಾಯವೊಂದರ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕು ಕಸಿಯುವ ಹುನ್ನಾರವಾಗಿದೆ . ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಹೊರಬರುವವರೆಗೆ ಹಿಜಾಬ್ ಸಂಬಂಧ ಯಥಾಸ್ಥಿತಿ ಕಾಪಾಡಬೇಕು , ಕಾಲೇಜು ಅವರಣದಲ್ಲಿ ರಾಜಕಾರಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿದರು.
ಈ ವೇಳೆ ನೀಲಿ ಶಾಲು ದರಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಎದುರು ಕೇಸರಿ ಶಾಲಿನೊಂದಿಗೆ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಪ್ರತ್ಯೇಕವಾಗಿ ಜೈಭೀಮ್, ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.
ಈ ವೇಳೆ ಎರಡು ಕಡೆಯವರು ಪರಸ್ಪರ ಘೋಷಣೆ ಕೂಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.