ಕಲಬುರಗಿ: ಬಿಜೆಪಿ ಶಾಸಕ ತೇಲ್ಕೂರ ವಿರುದ್ಧ ಮಹಿಳೆಯ ಮೇಲೆ ದೌರ್ಜನ್ಯದ ಆರೋಪ

Update: 2022-02-07 08:36 GMT
ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ

ಕಲಬುರಗಿ: ಸೇಡಂನ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಅವರು, ಮಹಿಳೆ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಶಾಸಕ ತೆಲ್ಕೂರ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ತೆಲ್ಕೂರ ವಿರುದ್ಧ ಮಹಿಳೆಯೊಬ್ಬರು ದೌರ್ಜನ್ಯ ಆರೋಪ ಮಾಡಿದ್ದು, ಕಳೆದ 14 ವರ್ಷದಿಂದ ಆಕೆಯ ಮೇಲೆ ಶಾಸಕರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ನನಗೆ ನ್ಯಾಯಬೇಕು ಅಂತ ಮಹಿಳೆ ಕೇಳಿಕೊಂಡಿದ್ದಾರೆ.

ಆರೋಪ ಮಾಡುತ್ತಿದ್ದಂತೆ ಬೆಂಗಳೂರು ವಿಧಾನಸೌಧಾ ಪೊಲೀಸರು ಬೆಳಗ್ಗೆ ಮನೆಯಿಂದ ಕರೆತಂದು ರಾತ್ರಿ 9 ಗಂಟೆವರೆಗೆ ಸ್ಟೇಷನ್‌ನಲ್ಲಿ ಕೂಡಿ ಹಾಕಿದ್ದಾರೆ. ಕಾಂಗ್ರೆಸ್ ಪ್ರಚೋದಿಸಿದ್ದು ಕಾಂಗ್ರೆಸ್‌ನವರು ಹೇಳಿದಂತೆ ಆರೋಪ ಮಾಡಿದ್ದೇನೆ ಅಂತ ಬರೆದುಕೊಡು ಎಂದು ಸಿಬ್ಬಂದಿ ಒತ್ತಡ ಹಾಕಿದ್ದಾರೆಂದು ಮಹಿಳೆ ಹೇಳಿದ್ದಾರೆ.

*ಸ್ಟೇಷನ್​ನಿಂದ ಹೊರಬಂದ ಬಳಿಕ ಮಹಿಳೆ ವಕೀಲ ಜಗದೀಶ್​​ ಅವರಿಗೆ ವಿಡಿಯೋ ಕಾಲ್ ಮಾಡಿ, ತಮ್ಮ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ವಿಡಿಯೋ ಕಾಲ್​ನಲ್ಲಿ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ವಕೀಲ ಜಗದೀಶ್​​ ಅವರು ತಮ್ಮ ಫೇಸ್‌ಬುಕ್ ಲೈವ್​​ನಲ್ಲಿ ಈ ವಿಷಯ ಜನರ ಮುಂದೆ ಇಟ್ಟಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ತೆಲ್ಕೂರ, ನಾನು ಯಾವುದೇ ತಪ್ಪು ಮಾಡಿಲ್ಲ, ಸರ್ಕಾರ ಯಾವುದೇ ರೀತಿಯ ತನಿಖೆ ಬೇಕಾದರೂ ನಡೆಸಬಹುದು. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಿ. ನಾನು ಯಾರ ಮಾನಕ್ಕೂ ಧಕ್ಕೆ ತರುವ ಕೆಲಸ ಮಾಡಿಲ್ಲ. ಪಕ್ಷಕ್ಕೆ ಹಾಗೂ ಮತದಾರರಿಗೆ ಮುಜುಗರ ತರುವ ಕೆಲಸ ಎಂದಿಗೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಹೇಳುವ ಮೂಲಕ ಆರೋಪ ತಳ್ಳಿ ಹಾಕಿದ್ದಾರೆ.

ಮಹಿಳೆಯೊಬ್ಬರು ನನಗೆ ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸ್ ಕಂಪ್ಲೇಂಟ್ ನೀಡಿದ್ದೇನೆ. ಹೀಗಾಗಿ ವಿಧಾನಸೌಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಾನು ಕಾನೂನು ರೀತಿಯಲ್ಲಿ ಇದನ್ನು ಎದರಿಸಲು ಸಿದ್ಧನಿದ್ದೇನೆ ಎಂದು ತೆಲ್ಕೂರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News