ಕಾನ್‌ಸ್ಟೇಬಲ್ ನೇಮಕ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ಸಿಎಂಗೆ ಶಾಸಕ ರಿಝ್ವಾನ್ ಅರ್ಶದ್ ಪತ್ರ

Update: 2022-02-07 11:53 GMT
 ಶಾಸಕ ರಿಝ್ವಾನ್ ಅರ್ಶದ್ 

ಬೆಂಗಳೂರು, ಫೆ.7: ಕಾನ್‌ಸ್ಟೇಬಲ್ ನೇಮಕ ವಯೋಮಿತಿ ಹೆಚ್ಚಳ ಕುರಿತು ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ. ಯುವಜನರ ಹಿತದೃಷ್ಟಿಯಿಂದ ಅವರು ಕ್ರಮ ಕೈಗೊಳ್ಳಲಿ. ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ಯುವಜನರಿಗೆ ಅನ್ಯಾಯವಾಗುತ್ತಿದೆ. ಗರಿಷ್ಠ ವಯೋಮಿತಿ 25 ವರ್ಷ ಇದ್ದು, ಬಹಳಷ್ಟು ಆಕಾಂಕ್ಷಿಗಳು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಶದ್ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‌ಗಳನ್ನು ಮಾಡಿರುವ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲೆ ಅತಿ ಕಡಿಮೆ ವಯೋಮಿತಿ ನಿಗದಿ ಮಾಡಲಾಗಿದೆ. ಕೇರಳ-36 ವರ್ಷ, ಆಂಧ್ರಪ್ರದೇಶ-30 ವರ್ಷ, ಮಹಾರಾಷ್ಟ್ರ-38 ವರ್ಷ ಗರಿಷ್ಠ ವಯೋಮಿತಿ ಇದೆ. ಪ್ರತಿ ವರ್ಷ ನಿಯಮಿತವಾಗಿ ನೇಮಕಾತಿ ನಡೆಯದೆ ತುಂಬಾ ಯುವಜನರು ವಯೋಮಿತಿ ಮೀರಿ ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಹಲವು ಮನವಿಗಳಿಗೆ ಸರಕಾರ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.

ಕಳೆದ 2 ವರ್ಷ ಕೋವಿಡ್-19 ಕಾರಣಕ್ಕೆ ನೇಮಕಾತಿ ನಡೆಯದೆ, ತುಂಬಾ ಆಕಾಂಕ್ಷಿಗಳು ಅವಕಾಶ ವಂಚಿತರಾಗುವ ಅಪಾಯವಿದ್ದು ಸರಕಾರ ಈಗಲಾದರು ಕ್ರಮಕ್ಕೆ ಮುಂದಾಗಲಿ ಎಂದು ರಿಝ್ವಾನ್ ಅರ್ಶದ್ ಆಗ್ರಹಿಸಿದ್ದಾರೆ.

ಪತ್ರದ ಸಾರಾಂಶ: ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಪ್ರತಿ ವರ್ಷವೂ ನೇಮಕಾತಿ ನಡೆಯಬೇಕಿದ್ದು, ಅದರಲ್ಲಿ ಕೆಲವು ತಾಂತ್ರಿಕ ಕಾರಣ ಮತ್ತು ಕೋವಿಡ್ ಕಾರಣದಿಂದಾಗಿ ನಡೆಯದೆ ಒಮ್ಮೊಮ್ಮೆ 2 ರಿಂದ 3 ವರ್ಷಗಳ ಅವಧಿಯನ್ನು ತೆಗೆದುಕೊಳ್ಳುವುದರಿಂದ ಉದ್ಯೋಗಾಕಾಂಕ್ಷಿಗಳು ಹಾಗೂ ಗ್ರಾಮೀಣ ಅಭ್ಯರ್ಥಿಗಳಿಗೆ ವಯೋಮಿತಿಯನ್ನು ಮೀರುವ ಸಾಧ್ಯತೆಯು ಹೆಚ್ಚಾಗಿರುತ್ತದೆ ಎಂದು ರಿಝ್ವಾನ್ ಅರ್ಶದ್ ತಿಳಿಸಿದ್ದಾರೆ.

ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಪದವಿಯನ್ನು ಪೂರ್ಣಗೊಳಿಸಿ ನಂತರ ಉದ್ಯೋಗ ಬಯಸುವುದರಿಂದ ಅಂತಹವರಿಗೆ ಕೇವಲ 2 ಅಥವಾ 3 ಪ್ರಯತ್ನಗಳು ಮಾತ್ರ ಲಭ್ಯವಾಗಲಿವೆ(ಅದೂ ಪ್ರತಿ ವರ್ಷ ನೇಮಕಾತಿ ನಡೆದರೆ ಮಾತ್ರ, ಇಲ್ಲದಿದ್ದರೆ ಕೇವಲ 1 ಅಥವಾ 2 ಪ್ರಯತ್ನಗಳು ಮಾತ್ರ ಲಭ್ಯವಾಗಲಿವೆ) ಎಂದು ಅವರು ಹೇಳಿದ್ದಾರೆ.

ಆದುದರಿಂದ, ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಎಲ್ಲ ತರಹದ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ವಯೋಮಿತಿಯನ್ನು ಸಾಮಾನ್ಯ ವರ್ಗದವರಿಗೆ ಗರಿಷ್ಠ 30 ವರ್ಷಗಳು ಮತ್ತು ಎಸ್ಸಿ, ಎಸ್ಟಿ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 32 ವರ್ಷಗಳಿಗೆ ಹೆಚ್ಚಳ ಮಾಡಿ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡುವಂತೆ ರಿಝ್ವಾನ್ ಅರ್ಶದ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News