ಕುಮಾರಸ್ವಾಮಿ ಬಗ್ಗೆ ಕೇಳಬೇಡಿ ಎಂದ ಮಾಜಿ ಶಾಸಕ ವೈಎಸ್‍ವಿ ದತ್ತ
ಬೆಂಗಳೂರು, ಫೆ. 7: `ಜಾತ್ಯತೀತ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ. ನಾನು 20 ವರ್ಷದ ಹುಡುಗನಿದ್ದಾಗಲೇ ಗೌಡರ ಜೊತೆ ಸೇರಿದ್ದೆ. ನನಗೀಗ 69 ವರ್ಷವಾಗಿದೆ. ನನ್ನ ಸಂಪರ್ಕವೇನಿದ್ದರೂ ದೇವೇಗೌಡರ ಜೊತೆಗೆ. ಆದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಕೇಳಬೇಡಿ, ಅವರ ಕುರಿತು ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಮಾಜಿ ಶಾಸಕ ವೈಎಸ್‍ವಿ ದತ್ತ ಇಂದಿಲ್ಲಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಇತ್ತೀಚಿನ ದಿನಗಳಲ್ಲಿ ಜಾತ್ಯತೀತ ನಿಲುವು ಶಿಥಿಲವಾಗುತ್ತಿದೆ. ಯಾವುದೇ ಕಾರಣಕ್ಕೂ ಸಿದ್ಧಾಂತದಲ್ಲಿ ಬದಲಾವಣೆಯಾಗಬಾರದು. ನಾವು ಏಕೆ ಪ್ರಾದೇಶಿಕ ಪಕ್ಷದಲ್ಲಿ ದುಡಿಯುತ್ತಿದ್ದೇವೆ? ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳೆರಡನ್ನೂ ಸಮಾನವಾಗಿ ದೂರದಲ್ಲಿ ಇಡಬೇಕು. ಆ ಮೂಲಕ ಜಾತ್ಯತೀತ ನಿಲುವಿಗೆ ಬದ್ಧವಾಗಿರಬೇಕು. ಆದರೆ, ಪಕ್ಷ ಬಿಜೆಪಿ ವಿರುದ್ಧ ಸ್ಪಷ್ಟವಾಗಿ ಹೋರಾಟ ಮಾಡುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ' ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ರಾಗಿ ಖರೀದಿಗೆ ಸಂಬಂಧಿಸಿದಂತೆ ಸಮಸ್ಯೆ ಇದ್ದು ಈ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ. ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ, ನಾನು ಈ ಬಗ್ಗೆ ಈಗಲೇ ಏನು ಮಾತನಾಡುವುದಿಲ್ಲ, ಮೌನ, ಮೌನ' ಎಂದು ವೈಎಸ್‍ವಿ ದತ್ತ ತಿಳಿಸಿದರು