×
Ad

ರೇಕುಗಳ ಸರಬರಾಜಿಗೆ ರೈಲ್ವೆ ಸಚಿವರಿಗೆ ಮನವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-02-07 22:50 IST

ಹೊಸದಿಲ್ಲಿ, ಫೆ. 7: ಕಲ್ಲಿದ್ದಿಲು ಸಾಗಾಣಿಕೆಗೆ ಅಗತ್ಯವಿರುವ ರೇಕುಗಳ ಸರಬರಾಜಿನ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ರೈಲ್ವೆ ಮಂಡಳಿಯಲ್ಲಿ ಸಂಬಂಧಿಸಿದವರಿಗೆ ಸೂಚನೆ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ದಿಲ್ಲಿಯಲ್ಲಿ ರೈಲ್ವೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳು ರೈಲ್ವೆ ಮಂಡಳಿ ಅಧ್ಯಕ್ಷರೊಂದಿಗೆ ಮಾತನಾಡಲಿದ್ದಾರೆ. ರಾಜ್ಯದಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ರಸ್ತೆ ಮತ್ತು ರೈಲ್ವೆ ಯೋಜನೆಗಳಲ್ಲಿ ತೆರಿಗೆ ವಿನಾಯ್ತಿ ಹಾಗೂ ಅನುಮೋದನೆಗಳನ್ನು ನೀಡುವಲ್ಲಿ ರಾಜ್ಯ ಸರಕಾರ ಹಿಂದೇಟು ಹಾಕುತ್ತಿಲ್ಲ ಎಂದರು.

ಎಸ್‍ಟಿಆರ್‍ಆರ್ ರಸ್ತೆಗಳಿಗೆ ಜಿಎಸ್ಟಿ ವಿನಾಯ್ತಿ ನೀಡಲು ಒಪ್ಪಿಗೆ ನೀಡಲಾಗಿದೆ. ಭೂ ಸ್ವಾಧೀನದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಶೇ.50ಃ50ರ ಪಾಲುದಾರಿಕೆಯಲ್ಲಿ ರೈಲ್ವೆ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ.  ರೈಲ್ವೆ ಯೋಜನೆಗೆ ರಾಜ್ಯ ಸರಕಾರದಿಂದ ಒಂದೇ ವರ್ಷ ಸಂಪೂರ್ಣ ಹಣ ಬಿಡುಗಡೆ ಮಾಡಲಾಗುವುದಿಲ್ಲ. ಆದ್ಯತೆ ಆಧಾರದ ಮೇಲೆ ಹಣ ಬಿಡುಗಡೆ ನಿಗದಿಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೆಲವು ರೈಲ್ವೆ ಯೋಜನೆಗಳಲ್ಲಿ ಹಣ ಬಿಡುಗಡೆಯಾಗಿದ್ದರೂ ಭೂ ಸ್ವಾಧೀನದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರದಲ್ಲಿ ಮಂಜೂರಾತಿ ದೊರೆತು ಅನುದಾನ ಬಿಡುಗಡೆಯಾಗಿರುವ ಪ್ರಮುಖ ರೈಲ್ವೆ ಯೋಜನೆಗಳಿಗೆ ರಾಜ್ಯ ಸರಕಾರವೂ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.

ಆರೋಗ್ಯ ಮೂಲಸೌಕರ್ಯಕ್ಕೆ ಅನುದಾನ: ಆರೋಗ್ಯ ಸಚಿವರನ್ನು ಭೇಟಿಯಾಗಿ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ರಾಜ್ಯ ಸರಕಾರಕ್ಕೆ ಒದಗಿಸಲು ಮನವಿ ಮಾಡಲಾಗಿದ್ದು, ಅವರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News