×
Ad

ಮಡಿಕೇರಿ: ಹಿಜಾಬ್ ಬೆಂಬಲಿಸಿ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Update: 2022-02-07 23:56 IST

ಮಡಿಕೇರಿ ಫೆ.7 :  ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿರವಸ್ತ್ರ ಧರಿಸಲು ಅವಕಾಶ ನೀಡಬೇಕು ಮತ್ತು ಸಂವಿಧಾನಬದ್ಧವಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಸಪಡಿಸಬೇಕೆಂದು ಒತ್ತಾಯಿಸಿ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ನಡೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. 

ವೇದಿಕೆಯ ಜಿಲ್ಲಾ ಸಂಚಾಲಕಿ ಅಜ್ಮಿಲ ಮಾತನಾಡಿ, ಇಸ್ಲಾಂ ಧರ್ಮದ ಧಾರ್ಮಿಕ ಮೂಲಭೂತ ತತ್ವಗಳ ಅನುಗುಣವಾಗಿ ಹೆಣ್ಣು ಶಿರವಸ್ತ್ರ ಧರಿಸುವುದು ಕಡ್ಡಾಯಗೊಳಿಸಿದೆ. ಸಂವಿಧಾನದ ಅನುಚ್ಛೇದ 25, 26ರ ಪ್ರಕಾರ ಧಾರ್ಮಿಕ ನಂಬಿಕೆಗಳ, ಆಚಾರಗಳ ಅನುಸರಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗಿದ್ದರು ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ ಸಮವಸ್ತ್ರ ನೆಪವನ್ನಿಟ್ಟು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡದೆ ಅಮಾನವೀಯತೆ ಮೆರೆಯಲಾಗಿದೆ ಎಂದು ಆರೋಪಿಸಿದರು.

ಒಂದು ವೇಳೆ ಕಾಲೇಜುಗಳಲ್ಲಿ ಸಮಸ್ತ್ರ ಕಡ್ಡಾಯಗೊಳಿಸಿದರೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಸಮವಸ್ತ್ರದ ಭಾಗವಾಗಿರುವ ಶಾಲನ್ನು ಬಳಸಿ ಶಿರವಸ್ತ್ರ ಧರಿಸಲು ಅವಕಾಶ ನೀಡಬೇಕು ಮತ್ತು ಸಂವಿಧಾನಬದ್ಧವಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸಬೇಕೆಂದು ಒತ್ತಾಯಿಸಿದರು.  

ನಫ್ರಿಯ, ಅನೀಕ, ನಫೀಸ ಅಕ್ಬರ್, ಝಕೀಯ, ನಸೀರ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News