ಕಾಶ್ಮೀರದ ಮೇಲಿನ ಏಕಪಕ್ಷೀಯ ಕ್ರಮಗಳಿಗೆ ವಿರೋಧ, ಪಾಕಿಸ್ತಾನದೊಂದಿಗಿನ ಸಂಬಂಧ ಮುಂದುವರಿಯಲಿದೆ: ಚೀನಾ

Update: 2022-02-07 18:33 GMT

 ಬೀಜಿಂಗ್, ಫೆ.7: ಪಾಕಿಸ್ತಾನದೊಂದಿಗೆ ನಿಕಟ ಸಹಕಾರ ಸಂಬಂಧ ಮುಂದುವರಿಯಲಿದೆ ಎಂದು ವಾಗ್ದಾನ ನೀಡಿರುವ ಚೀನಾ, ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಮತ್ತು ಸೂಕ್ತರೀತಿಯಲ್ಲಿ ಇತ್ಯರ್ಥಗೊಳಿಸಬೇಕು. ಕಾಶ್ಮೀರದ ಮೇಲಿನ ಯಾವುದೇ ಏಕಪಕ್ಷೀಯ ಕ್ರಮಗಳು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಲಿದೆ ಎಂದು ಹೇಳಿದೆ.
 ‌
ಚೀನಾಕ್ಕೆ ಭೇಟಿ ನೀಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ , ನಿಧಾನಗತಿಯಲ್ಲಿ ಮುಂದುವರಿದಿರುವ ಚೀನಾ -ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಯೋಜನೆಗೆ ವೇಗ ನೀಡುವ ವಿಷಯದ ಸಹಿತ ಹಲವು ಪ್ರಮುಖ ವಿಷಯಗಳ ಬಗ್ಗೆ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಹಾಗೂ ಇತರ ಪ್ರಮುಖ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. 

ಪಾಕಿಸ್ತಾನದ ರಾಷ್ಟ್ರೀಯ ಹಿತಾಸಕ್ತಿ, ಸಾರ್ವಭೌಮತೆ, ಘನತೆಯ ರಕ್ಷಣೆ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಚೀನಾದ ಸಂಪೂರ್ಣ ಸಹಕಾರವನ್ನು ಈ ಸಂದರ್ಭ ಜಿಂಪಿಂಗ್ ಪುನರುಚ್ಚರಿಸಿದರು ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ಕ್ಸಿನ್ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ.

ಸಿಪಿಇಸಿಯ ಸಮಗ್ರ ಅಭಿವೃದ್ಧಿಯ ಸಹಿತ ಪ್ರಮುಖ ಯೋಜನೆಗಳ ಅನುಷ್ಟಾನದಲ್ಲಿ ಪಾಕ್ ಜತೆ ಕೈಜೋಡಿಸುವ ಆಶಯವನ್ನು ಜಿಂಪಿಂಗ್ ವ್ಯಕ್ತಪಡಿಸಿದರು. ಶಾಂತಿಯುತ ಮತ್ತು ಸಮೃದ್ಧ ದಕ್ಷಿಣ ಏಶ್ಯಾವು ಎಲ್ಲರ ಸಮಾನ ಹಿತಾಸಕ್ತಿಯಾಗಿದೆ ಎಂದು ಉಭಯ ಮುಖಂಡರ ಜಂಟಿ ಹೇಳಿಕೆ ತಿಳಿಸಿದೆ.
 
ಪ್ರಾದೇಶಿಕ ಸಹಕಾರಕ್ಕೆ ಉತ್ತೇಜನ ನೀಡಲು ಮತ್ತು ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಯ ಗುರಿ ತಲುಪಲು ಬಾಕಿಉಳಿದಿರುವ ವಿವಾದಕ್ಕೆ ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಉಭಯ ಮುಖಂಡರು ಒತ್ತಿಹೇಳಿದರು. ಜಮ್ಮು ಕಾಶ್ಮೀರದಲ್ಲಿನ ಇತ್ತೀಚಿನ ಸ್ಥಿತಿಗತಿ, ಬೆಳವಣಿಗೆಗಳ ಬಗ್ಗೆ ಪಾಕಿಸ್ತಾನದ ನಿಯೋಗ ಚೀನಾಕ್ಕೆ ಮಾಹಿತಿ ನೀಡಿದೆ. 

ಕಾಶ್ಮೀರ ವಿಷಯವು ಇತಿಹಾಸಕ್ಕೆ ಸಂಬಂಧಿಸಿದ ವಿವಾದವಾಗಿದ್ದು ಇದನ್ನು ವಿಶ್ವಸಂಸ್ಥೆಯ ಸನ್ನದು, ಇದಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯ ಹಾಗೂ ದ್ವಿಪಕ್ಷೀಯ ಒಪ್ಪಂದದಡಿ ಪರಿಹರಿಸಬೇಕಿದೆ. ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಯಾವುದೇ ಏಕಪಕ್ಷೀಯ ಕ್ರಮವನ್ನು ಚೀನಾ ವಿರೋಧಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
  
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಪ್ರಯತ್ನ ಮತ್ತು ತ್ಯಾಗವನ್ನು ಚೀನಾ ಗುರುತಿಸಿದೆ ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧದ ಜಂಟಿ ಹೋರಾಟವನ್ನು ಮುಂದುವರಿಸಲು ಉಭಯ ದೇಶಗಳು ಬದ್ಧವಾಗಿವೆ. ಪಾಕಿಸ್ತಾನ ಮತ್ತು ಚೀನಾದ ಸಶಸ್ತ್ರ ಪಡೆಗಳ ನಡುವಿನ ರಕ್ಷಣಾ ಸಹಕಾರವನ್ನು ಮುಂದುವರಿಸಲೂ ಸಮ್ಮತಿಸಲಾಗಿದೆ. ಉಭಯ ದೇಶಗಳ ನಡುವಿನ ಸಶಕ್ತ ಭದ್ರತಾ ಸಹಕಾರವು ಈ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲು ಪ್ರಮುಖ ಅಂಶವಾಗಿದೆ. 

ಸಿಪಿಇಸಿ ವಿರುದ್ಧದ ಎಲ್ಲಾ ನಕರಾತ್ಮಕ ಪ್ರಚಾರ ಮತ್ತು ಬೆದರಿಕೆಯನ್ನು ಸಶಕ್ತವಾಗಿ ಎದುರಿಸಲು ಉಭಯ ದೇಶಗಳೂ ಬದ್ಧವಾಗಿವೆ. ವಿಶ್ವಸಂಸ್ಥೆ ಸಹಿತ ಎಲ್ಲಾ ವೇದಿಕೆಗಳಲ್ಲೂ ಪಾಕಿಸ್ತಾನಕ್ಕೆ ಚೀನಾದ ಬೆಂಬಲ ಮುಂದುವರಿಯಲಿದೆ ಎಂದು ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
  
ಈ ಭೇಟಿಯ ಸಂದರ್ಭ ಉಭಯ ದೇಶಗಳು ಆರ್ಥಿಕ, ತಾಂತ್ರಿಕ, ಕೈಗಾರಿಕೆ, ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ, ಬಾಹ್ಯಾಕಾಶ ಕ್ಷೇತ್ರ, ಲಸಿಕೆ, ಡಿಜಿಟಲೀಕರಣ, ವಿಪತ್ತು ನಿರ್ವಹಣೆ, ಸಂಸ್ಕೃತಿ, ಕ್ರೀಡೆ, ವೃತ್ತಿಪರ ಶಿಕ್ಷಣ ಇತ್ಯಾದಿ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದ ಪತ್ರಕ್ಕೆ ಸಹಿ ಹಾಕಿವೆ. ಇದರಲ್ಲಿ ಚೀನಾ-ಪಾಕ್ ಆರ್ಥಿಕ ಕಾರಿಡಾರ್ನ 2ನೇ ಹಂತದ ಯೋಜನೆಯೂ ಸೇರಿದ್ದು ಇದಕ್ಕೆ ಇದುವರೆಗೆ ಚೀನಾ 25 ಬಿಲಿಯನ್ ಡಾಲರ್ನಷ್ಟು ಹಣ ವಿನಿಯೋಗಿಸಿದೆ. 2ನೇ ಹಂತವನ್ನು ಅಫ್ಗಾನಿಸ್ತಾನದವರೆಗೆ ವಿಸ್ತರಿಸುವ ಪ್ರಸ್ತಾವನೆಯ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿಪಿಇಸಿ ಯೋಜನೆ ನಮ್ಮ ಪ್ರದೇಶದಲ್ಲಿದೆ: ಭಾರತ

ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಯೋಜನೆ(ಸಿಪಿಇಸಿ)ಯು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗಲಿದ್ದು ಇದು ಭಾರತಕ್ಕೆ ಸೇರಿದ ಪ್ರದೇಶವಾಗಿದೆ ಎಂದು ಈ ಹಿಂದೆಯೇ ಭಾರತ ಆಕ್ಷೇಪಿಸಿದೆ.

ಉಭಯ ದೇಶಗಳ ಜಂಟಿ ಹೇಳಿಕೆಯಲ್ಲಿ ಸಿಪಿಇಸಿ ಕುರಿತು ಪ್ರಸ್ತಾಪ ಮಾಡಿರುವುದನ್ನು 2021ರ ಜುಲೈಯಲ್ಲಿ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಆಕ್ಷೇಪಿಸಿದ್ದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಯಥಾಸ್ಥಿತಿಯನ್ನು ಬದಲಿಸುವ ಇತರ ದೇಶದ ಮತ್ತು ಪಾಕಿಸ್ತಾನದ ಪ್ರಯತ್ನವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಪಾಕಿಸ್ತಾನವು ಅಕ್ರಮವಾಗಿ ಅತಿಕ್ರಮಿಸಿರುವ ಭಾರತದ ಪ್ರದೇಶದಲ್ಲಿ ಯಾವುದೇ ಬದಲಾವಣೆಯನ್ನು ವಿರೋಧಿಸುವ ಜತೆಗೆ, ಇಂತಹ ಪ್ರಯತ್ನಗಳನ್ನು ಕೈಬಿಡುವಂತೆ ಆಗ್ರಹಿಸುತ್ತೇವೆ ಎಂದು ಭಾರತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News