ಕಲಬುರಗಿ : ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿ ನಾಲ್ಕು ವರ್ಷದ ಬಾಲಕ ನೇಮಕ !
ಕಲ್ಬುರ್ಗಿ: ಚಿರಂಜೀವಿ ದೊಡ್ಡಪ್ಪ ಅಪ್ಪ ಎಂಬ ನಾಲ್ಕು ವರ್ಷದ ಬಾಲಕನನ್ನು 200 ವರ್ಷ ಹಳೆಯ ಶರಣ ಬಸವೇಶ್ವರ ಸಂಸ್ಥಾನದ ಒಂಬತ್ತನೇ ಪೀಠಾಧಿಪತಿಯಾಗಿ ಎಂಟನೇ ಪೀಠಾಧಿಪತಿ ಮತ್ತು ಬಾಲಕನ ತಂದೆ ಶರಣ ಬಸಪ್ಪ ಅಪ್ಪ ಸೋಮವಾರ ನೇಮಕ ಮಾಡಿದ್ದಾರೆ.
ಬಡಬಗ್ಗರಿಗೆ ದಾಸೋಹ ಎಂಬ ಪರಿಕಲ್ಪನೆಯನ್ನು ಆರಂಭಿಸಿದ ಹತ್ತೊಂಬತನೇ ಶತಮಾನದ ಸಂತ ಶರಣಬಸವೇಶ್ವರರು ಸ್ಥಾಪಿಸಿದ 200 ವರ್ಷ ಇತಿಹಾಸ ಹೊಂದಿರುವ ಮಠದ ಅತ್ಯಂತ ಕಿರಿಯ ಮಠಾಧೀಶನಾಗಿ ಇದೀಗ ಚಿರಂಜೀವಿ ನೇಮಕಗೊಂಡಿದ್ದಾನೆ.
ನೂರಾರು ಸ್ವಾಮೀಜಿಗಳು ಸಮಾರಂಭದಲ್ಲಿ ಹಾಜರಿದ್ದು, ಹೊಸ ಪೀಠಾಧಿಪತಿಯನ್ನು ಆಶೀರ್ವದಿಸಿದರು.
ಅಧಿಕಾರ ಹಸ್ತಾಂತರ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶರಣ ಬಸಪ್ಪ ಅಪ್ಪ, ಸಂಸ್ಥಾನ ಅನುಸರಿಸುವ ರೀತಿ ನೀತಿ ಮತ್ತು ಸಂಪ್ರದಾಯಗಳ ಪ್ರಕಾರ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಹಾಗೂ ಪೂಜೆಗಳನ್ನು ನಡೆಸುವ ಅಧಿಕಾರವನ್ನು ಮಗ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು. ಹಲವು ವೀರಶೈವ ಮಠಗಳ ಸ್ವಾಮೀಜಿಗಳು ಮತ್ತು ಭಕ್ತರ ಹರ್ಷೋದ್ಗಾರಗಳ ನಡುವೆ ಶರಣ ಬಸಪ್ಪ ಅಪ್ಪ ಈ ಘೋಷಣೆ ಮಡಿದರು.
ಹರ್ಕುಡ್ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಶರಣಬಸಪ್ಪ ಅಪ್ಪ ಅವರು ಪ್ರಸಾದ ಬಟ್ಟಲನ್ನು ಮತ್ತು ಲಿಂಗಸಜ್ಜಿಕೆಯನ್ನು ಮಗನಿಗೆ ವಿಧಿವತ್ತಾಗಿ ಹಸ್ತಾಂತರಿಸಿದರು.