×
Ad

ಮೈಸೂರು: ಭಾರೀ ವಿರೋಧದ ಮಧ್ಯೆ ರಾತ್ರೋರಾತ್ರಿ ಎನ್.ಟಿ.ಎಂ ಶಾಲೆ ಕಟ್ಟಡ ನೆಲಸಮ

Update: 2022-02-08 11:01 IST

ಮೈಸೂರು: ಭಾರೀ ವಿರೋಧದ ನಡುವೆಯೇ ನಗರದ ಎನ್.ಟಿ.ಎಂ ಮಹರಾಣಿ ಹೆಣ್ಣು ಮಕ್ಕಳ ಶಾಲೆಯನ್ನು ಸೋಮವಾರ ತಡರಾತ್ರಿ  ನೆಲಸಮಗೊಳಿಸಲಾಯಿತು. ಇದಕ್ಕೆ ವಿರೋಧಿಸಿ ಪ್ರತಿಭಟನೆಗೆ ಇಳಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ಸೋಮವಾರ ರಾತ್ರಿ 11.30 ಗಂಟೆ ಸುಮಾರಿಗೆ ಶಾಲೆ ಗೆ ಸೇರಿದ ರಸ್ತೆಗೆ ನಾಕಾ ಬಂದಿ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.

ವಿಷಯ ತಿಳಿದು ಹೋರಾಟಗಾರರಾದ ಸ.ರಾ.ಸುದರ್ಶನ್, ಉಗ್ರನರಸಿಂಹೇಗೌಡ, ಚಂದ್ರಶೇಖರ ಮೇಟಿ, ಕರುಣಾಕರ್, ಮೋಹನ್ ಕುಮಾರ್ ಗೌಡ, ರೈತ ಸಂಘದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ ಸೇರಿದಂತೆ ಹಲವರು ಶಾಲೆ ನೆಲಸಮಗೊಳಿಸದಂತೆ ತಡೆದರು. ಇದಕ್ಕೆ ಪೊಲೀಸರು ನ್ಯಾಯಾಲಯದ ಆದೇಶವಾಗಿದೆ. ಇದು ಖಾಸಗಿ ಜಾಗ ಎಂದು ಹೇಳಿದರು. ಆದೇಶ ಪ್ರತಿ ತೋರಿಸುವಂತರ ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನಬಚಕಮಕಿ ನಡೆಯಿತು.

ನಾಲ್ಕು ಜೆಸಿಬಿ ಗಳು ಶಾಲೆ ನೆಲಸಮಗೊಳಿಸಲು ಆಗಮಿಸುತ್ತುಇದ್ದಂತೆ ಜೆಸಿಬಿಗೆ ಅಡ್ಡಲಾಗಿ ಮಲಗಿದ ಮೋಹನ್ ಕುಮಾರ್ ಗೌಡ, ಉಗ್ರನರಸಿಂಹೇಗೌಡ, ಸ.ರಾ.ಸುದರ್ಶನ್, ಕರುಣಾಕರ್, ಹೊಸಕೋಟೆ ಬಸವರಾಜು, ಚಂದ್ರಶೇಖರ ಮೇಟಿ, ಪಿ.ಮರಂಕಯ್ಯ ಅವರನ್ನು ಪೊಲೀಸರು ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.

ಪ್ರತಿಭನಾಕಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ವಿರೋಧದ ನಡುವೆಯೂ ಎನ್.ಟಿ.ಎಂ‌. ಶಾಲೆಯನ್ನು ನೆಲಸಮಗೊಳಿಸಿದರು.

ಬಹಳ ಹಳೆಯದಾದ ಎನ್.ಟಿ.ಎಂ ಶಾಲೆ ಆವರಣದಲ್ಲಿ ಒಂದೂ ವರೆ ದಶಕದ ಹಿಂದೆ ವಿವೇಕಾನಂದರು ಬಂದು ವಾಸ್ತವ್ಯ ಹೂಡಿದ್ದರು ಎಂದು ಈ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ 2013 ರಲ್ಲಿಯೇ ಸರ್ಕಾರ ಹಸ್ತಾಂತರಿಸಿತ್ತು. ಆದರೆ ಕನ್ನಡಪರ ಹೋರಾಟಗಾರರು, ಪ್ರಗತಿಪರ, ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು  ಶಾಲೆ ತೆರವುಗೊಳಿಸದಂತೆ ಹೋರಾಟ ತಡೆಯೊಡ್ಡಿದ್ದರು.

ಈಗ್ಗೆ ಮೂರು ದಿನಗಳ ಹಿಂದೆ ಈ ಶಾಲೆಯನ್ನು ಎದುರಿಗೆ ಇರುವ ಮಹರಾಣಿ ಬಿಎಡ್ ಕಾಲೇಜಿನ ಆವರಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆ ಸಂದರ್ಭದಲ್ಲೂ ಹೋರಾಟಗಾರರು ಪ್ರತಿಭಟಸಿ ಸ್ಥಳಾಂತರ ಮಾಡದಂತೆ ರಸ್ತೆಗೆ ಅಡ್ಡಲಾಗೆ ಮಲಗಿದ್ದರು.

ಆದರೆ ಇದೀಗ ಬಹಳ ಹಳೆಯದಾದ ಎನ್.ಟಿ.ಎಂ.ಹೆಣ್ಣುಮಕ್ಕಳ ಶಾಲೆಯೊಂದು ನೆಲಸಮಗೊಂಡು ಇತಿಹಾಸದ ಪುಟ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News