ಕುಶಾಲನಗರ: ಕೇಸರಿ‌ ಶಾಲು ಹಾಕಲು ನಿರಾಕರಿಸಿದ್ದಕ್ಕೆ ಗಲಾಟೆ, ವಿದ್ಯಾರ್ಥಿಗೆ ಚಾಕುವಿನಿಂದ ಇರಿತ; ಆರೋಪ

Update: 2022-02-08 17:36 GMT

ಕುಶಾಲನಗರ, ಫೆ.8: ಕೇಸರಿ ಶಾಲು ಹಾಕುವ ವಿಚಾರವಾಗಿ ಕುಶಾಲನಗರದ ಸುಂದರನಗರ ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, ಪ್ರಥಮ ವರ್ಷದ ವಿದ್ಯಾರ್ಥಿ ಚಾಕುವಿನಿಂದ ಇರಿದ ಘಟನೆ ಮಂಗಳವಾರ ನಡೆದಿದೆ. 

ಸುಂದರನಗರ ಕಾಲೇಜಿನ ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಸಂದೀಪ(20) ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಶಿವಮೊಗ್ಗ: ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ ವಿದ್ಯಾರ್ಥಿಗಳು! 

ಕಾಲೇಜಿಗೆ ಸ್ಕಾರ್ಫ್ ಹಾಕಿ ಬರುತ್ತಿದ್ದುದನ್ನು ವಿರೋಧಿಸಿ ಸುಂದರನಗರ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲನ್ನು ಹಾಕಿ ಪ್ರತಿಭಟಿಸುತ್ತಿದ್ದರು. ಈ ವೇಳೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಸಂದೀಪ, ವಿಕ್ರಂ ಎಂಬ ಪ್ರಥಮ ವರ್ಷದ ವಿದ್ಯಾರ್ಥಿ ಸ್ನೇಹಿತೆಗೆ ಶಾಲು ಹಾಕುವಂತೆ ತಿಳಿಸಿದಾಗ ವಿಕ್ರಂ ಅದನ್ನು ವಿರೋಧಿಸಿದ್ದಾನೆ.  ಈ ಸಂದರ್ಭ ವಿಕ್ರಂ ಹಾಗೂ ಸಂದೀಪರವರ ಗುಂಪಿನ ನಡುವೆ ಕಾಲೇಜು ಕ್ಯಾಂಪಸ್ ನ ಒಳ ಭಾಗದಲ್ಲಿ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

ಬಳಿಕ ಈ ಗಲಾಟೆ ಕಾಲೇಜು ಗೇಟ್ ನ ಬಳಿ ಮುಂದುವರಿದು ವಿಕ್ರಂ ಎಂಬ ಯುವಕ ಸಂದೀಪ್ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ನಂತರ ಗೋಪಾಲ್ ಸರ್ಕಲ್ ನ ಶ್ರೀದೇವಿ ಬಾರ್ ನ ಸಮೀಪ ವಿಕ್ರಂ ಹಾಗೂ ದನುಷ್ ಎಂಬವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. 

ಎರಡೂ ಗುಂಪಿನ ನಡುವೆ ನಡೆದ ಗಲಾಟೆಯಲ್ಲಿ ಸಂದೀಪರವರ ಹೆಗಲಿಗೆ ಹಾಗೂ ಬೆನ್ನಿಗೆ ಚಾಕುವಿನಿಂದ ಇರಿಯಲಾಗಿದೆ. ವಿಕ್ರಂ ಅವರ ತಲೆ ಹಾಗೂ ಕೈಗೆ ಪೆಟ್ಟಾಗಿದ್ದು, ಸಂದೀಪ ಹಾಗೂ ವಿಕ್ರಂ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಂತರ ಎರಡೂ ಗುಂಪಿನವರನ್ನು ಪೋಲೀಸರು ಠಾಣೆಯಲ್ಲಿ ವಿಚಾರಣೆಗೆ ಒಳ ಪಡೆಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳನ್ನು ಕೆಲವರು ರಾಜಕೀಯವಾಗಿ ಬಳಸಿಕೊಂಡು ಈ ರೀತಿ ಬಲಿಪಶುವಾಗಿಸುತ್ತಾರೆ. ಕೆಲವರ ರಾಜಕೀಯ ದುರುದ್ದೇಶಕ್ಕೆ ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಇನ್ನು ಮುಂದೆ ಯಾರೂ ಕೂಡಾ ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಇದಕ್ಕೆ ಕಡಿವಾಣ ಹಾಕಬೇಕು. 

ಹೆಚ್.ಸಿ.ಜಯಪ್ರಕಾಶ್- ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News