ಬಿಜೆಪಿಯಿಂದ ಸುವರ್ಣ ಗೋವಾ ನಿರ್ಮಾಣ: ಸಚಿವ ಪ್ರಭು ಚವ್ಹಾಣ್

Update: 2022-02-08 12:51 GMT

ಪಣಜಿ: ಮನೋಹರ್ ಪರಿಕ್ಕರ್ ಕಂಡಿದ್ದ ಸುವರ್ಣ ಗೋವಾದ ಕನಸನ್ನು ನನಸು ಮಾಡಿ, ಗೋಲ್ಡನ್ ಗೋವಾ ನಿರ್ಮಾಣ ಮಾಡುವುದೇ ಬಿಜೆಪಿ ಗುರಿಯಾಗಿದೆ ಎಂದು ಪಶು ಸಂಗೋಪನೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದರು.

ಗೋವಾ ರಾಜ್ಯದ ಕಲ್ಲಂಗೂಟ್ ಮತ್ತು ವಾಸ್ಕೋ  ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ  ಬಿರುಸಿನ ಪ್ರಚಾರ ನಡೆಸಿದ ಸಚಿವ ಪ್ರಭು ಬಿ.ಚವ್ಹಾಣ್, ಬಿಜೆಪಿಯು ಗೋವಾದಲ್ಲಿ ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡಿದೆ. ಗೋವಾ ಸಮಗ್ರ ಅಭಿವೃದ್ಧಿಯೇ ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದರು.

ಈ ಹಿಂದೆ ಬಿಜೆಪಿ ನೀಡಿದ್ದ ತನ್ನ ಭರವಸೆಗಳನ್ನು ಈಡೇರಿಸಿದೆ. ಗೋವಾ ಜಗತ್ತಿನ ಅತಿ ದೊಡ್ಡ ಪ್ರವಾಸಿ ತಾಣವನ್ನಾಗಿ ರೂಪಿಸಲು ಬಿಜೆಪಿ ಶ್ರಮಿಸಲಿದೆ ಎಂದು ತಿಳಿಸಿದರು.

ಗೋವಾ ರಾಜ್ಯದ ಅಭಿವೃದ್ಧಿ, ಗೋವಾ ಕನ್ನಡಿಗರ ರಕ್ಷಣೆ ಹಾಗೂ ಸರ್ಕಾರದ ಸವಲತ್ತುಗಳನ್ನು ಒದಗಿಸುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ. ಗೋವಾ ಕನ್ನಡಿಗರ ಅಭಿವೃದ್ಧಿಗೆ ಬದ್ಧವಾಗಿರುವ ಬಿಜಿಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಪ್ರಭು ಚವ್ಹಾಣ್ ಇದೇ ವೇಳೆ ಕರೆ ನೀಡಿದರು.

ಮುಖ್ಯಮಂತ್ರಿ ಪ್ರಮೊದ್ ಸಾವಂತ್ ಗೋವಾ ರಾಜ್ಯವನ್ನು ಇಡೀ ವಿಶ್ವವೇ ತನ್ನತ್ತಾ ತಿರುಗಿ ನೋಡುವಂತೆ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಗೋವಾದಲ್ಲಿ ಫ್ಲೈಓವರ್, ಐಐಟಿ, ವೈದ್ಯಕೀಯ ಕಾಲೇಜು, ಮುಂದಿನ ದಿನಗಳಲ್ಲಿ ಲೋಕಾರ್ಪಣೆಯಾಗಲಿರುವ ಏರ್ ಪೋರ್ಟ್ ಸೇರಿದಂತೆ ಗೋವಾ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದರಿಂದ ಇಲ್ಲಿನ ಮತದಾರರು ಬಿಜೆಪಿ ಬೆಂಬಲಿಸುವುದಾಗಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಭು ಚವ್ಹಾಣ್ ವಿಶ್ವಾಸ ವ್ಯಕ್ತಪಡಿಸಿದರು.

ಗೋವಾ ಚುನಾವಣೆ ಉಸ್ತುವಾರಿ ಹೊಣೆ ಹೊತ್ತಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ನೇತೃತ್ವದಲ್ಲಿ ಅಧಿಕಾರ ಹಿಡಿಯಲೇಬೇಕು ಎಂದು ಕಾರ್ಯತಂತ್ರ ರೂಪಿಸಲಾಗಿದ್ದು, ಗೋವಾ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.

ಕಲ್ಲಂಗೂಟ್ ಕ್ಷೇತ್ರದ ಅಭ್ಯರ್ಥಿ ಜೋಸೇಫ್ ಸಿಕ್ವೇರಾ ಮತ್ತು ವಾಸ್ಕೋ.  ಕ್ಷೇತ್ರದ  ಅಭ್ಯರ್ಥಿ ಕೃಷ್ಣಾ ಸಾಲ್ಕರ್ ಅವರ ಪರವಾಗಿ ಪ್ರಚಾರ ನಡೆಸಿದ ಪ್ರಭು ಚವ್ಹಾಣ್ ಅವರು, ಗೋವಾ ಕನ್ನಡಿಗರು ಹಾಗೂ ಬಂಜಾರ ಸಮುದಾಯದ ಪ್ರಮುಖ ಮುಖಂಡರುಗಳೊಂದಿಗೆ ಸಭೆ ನಡೆಸುವ ಮೂಲಕ ಅಬ್ಬರದ ಪ್ರಚಾರ ಮೂಲಕ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News