''ನಮ್ಮ ಗುಲಾಮಗಿರಿ ಇನ್ನೆಷ್ಟು ದಿನ?'': ಕುಮಾರಸ್ವಾಮಿ ಪ್ರಶ್ನೆ

Update: 2022-02-08 13:04 GMT

ಬೆಂಗಳೂರು, ಫೆ.8: ನೆಲ, ಜಲ ಮತ್ತು ಭಾಷೆಯ ಹಕ್ಕು ಸಾಧನೆಗಾಗಿ ನಮ್ಮ ಗುಲಾಮಗಿರಿ ಇನ್ನೆಷ್ಟು ದಿನ? ಭಾರತದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ. ಒಕ್ಕೂಟ ವ್ಯವಸ್ಥೆಯ ಗಣರಾಜ್ಯಕ್ಕೆ 73 ವರ್ಷ. ನಾಡಿನ ಏಕೀಕರಣಕ್ಕೂ 49ರ ಹೊತ್ತು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿ ಅನೇಕ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ಕರ್ನಾಟಕವು ಇಂದು ಪ್ರತಿಯೊಂದಕ್ಕೂ ಕೇಂದ್ರದ ಮುಂದೆ ದೇಹಿ ಎನ್ನುವಂಥ ದುಃಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉದ್ಯೋಗ, ಅನುದಾನ, ತೆರಿಗೆ ಪಾಲು ಹೀಗೆ ಎಲ್ಲದರಲ್ಲೂ ಕರ್ನಾಟಕದ ಕಡೆಗಣನೆ ನಿರಂತರವಾಗಿದೆ. ಹಕ್ಕುಗಳ ಸಾಧನೆಗಾಗಿ ಕನ್ನಡಿಗರೆಲ್ಲಾ ಒಟ್ಟಾಗಿ ಹೆಜ್ಜೆ ಇಡಬೇಕಿದೆ. ಒಗ್ಗಟ್ಟಿನ ಹೋರಾಟ ಬಿಟ್ಟರೆ ನಮಗೆ ನ್ಯಾಯ ಸಿಗದು ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ನಿಟ್ಟಿನಲ್ಲಿ ರಾಜ್ಯದ ಕನ್ನಡಪರ ಒಕ್ಕೂಟಗಳ ಮುಖಂಡರ ಜತೆ ಗುರುವಾರ 11 ಗಂಟೆಗೆ ಮುಕ್ತ ಮಾತುಕತೆ ನಡೆಸುತ್ತಿದ್ದೇನೆ. ನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರದ ದಿಕ್ಕಿನಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕನ್ನಡ ಮನಸುಗಳ ಜತೆಗಿನ ನನ್ನ ಚರ್ಚೆ ನಾಡಿನ ಪ್ರಗತಿಗೆ ನವದಿಕ್ಕು ತೊರಲಿದೆ ಎಂಬುದು ನನ್ನ ಅಚಲ ವಿಶ್ವಾಸ. ಕನ್ನಡದ ಮಕ್ಕಳಾದ ನಮ್ಮೆಲ್ಲರ ಕೆಚ್ಚು ಸುವರ್ಣ ಕರ್ನಾಟಕದ ಸಮಗ್ರ ಮುನ್ನಡೆಗೆ ನಾಂದಿ ಆಗಲಿ. ಬನ್ನಿ, ನಾವೆಲ್ಲರೂ ಒಂದು ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ಆಹ್ವಾನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News