"ಈ ಹುಡುಗಿಯನ್ನು ಕೆಣಕಲು ನಿಮಗೆ ಹಕ್ಕಿಲ್ಲ" ಎಂದು ಟ್ವೀಟಿಸಿ ಡಿಲೀಟ್‌ ಮಾಡಿದ ಸಂಸದ ಪ್ರತಾಪ್ ಸಿಂಹ?

Update: 2022-02-08 17:04 GMT

ಬೆಂಗಳೂರು: ರಾಜ್ಯದ ಶಾಲೆ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದು, ಮಂಗಳವಾರ ಹಲವು ಕಾಲೇಜುಗಳಲ್ಲಿ ಕಲ್ಲು ತೂರಾಟ, ಘರ್ಷಣೆಗಳು ನಡೆದಿದೆ. ಈ ನಡುವೆ ಸಂಸದ ಪ್ರತಾಪ್‌ ಸಿಂಹರ ಅಳಿಸಲ್ಪಟ್ಟ ಟ್ವೀಟ್‌ ಒಂದು ವೈರಲ್‌ ಆಗಿದೆ.

ಮಂಡ್ಯ ನಗರದ ಹೆದ್ದಾರಿ ಪಕ್ಕದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಆವರಣದಲ್ಲಿ ಜೈ ಶ್ರೀರಾಂ ಎಂದು ಘೋಷಣೆ ಕೂಗಿದ್ದಾರೆ. ಇದೇ ವೇಳೆ ಕಾಲೇಜಿಗೆ ಆಗಮಿಸಿದ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯೋರ್ವಳು ಸ್ಕೂಟರ್ ನಿಲ್ಲಿಸಿ ತರಗತಿಗೆ ತೆರಳುತ್ತಿದ್ದಾಗ ಕೇಸರಿ ಶಾಲು ವಿದ್ಯಾರ್ಥಿಗಳು ತಮ್ಮ ಘೋಷಣೆ ತೀವ್ರಗೊಳಿಸಿ ಆಕೆಯನ್ನು ಸುತ್ತುವರಿಯಲು ಯತ್ನಿಸಿದಾಗ  ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಈ ಸಂಬಂಧ ವಿದ್ಯಾರ್ಥಿನಿಯ ವೀಡಿಯೋ ಟ್ವಿಟರ್ ಸೇರಿದಂತೆ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದ್ದು, ಸಾವಿರಾರು ಜನರು ವಿದ್ಯಾರ್ಥಿನಿಯ ಮೇಲಿನ ಸಂಭಾವ್ಯ ದಾಳಿ ಘಟನೆಯನ್ನು ಖಂಡಿಸಿದ್ದರು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತ ಇಮ್ರಾನ್ ಖಾನ್ ಎಂಬವರ ಟ್ವೀಟ್ ಅನ್ನು ಹಂಚಿಕೊಂಡು "ಇದು ಸರಿಯಲ್ಲ, ಈ ರೀತಿ ಯಾರೂ ಮಾಡಬೇಡಿ. ನಿಮಗೆ ಈ ಹುಡುಗಿಯನ್ನು ಕೆಣಕಲು ಯಾವುದೇ ಹಕ್ಕಿಲ್ಲ" ಎಂದು ರಿಟ್ವೀಟ್‌ ಮಾಡಿದ್ದರು ಎನ್ನಲಾಗಿದೆ.  

ಆದರೆ, ಇದೀಗ ಈ ಟ್ವೀಟ್ ಪ್ರತಾಪ್ ಸಿಂಹ ಅವರ ಖಾತೆಯಲ್ಲಿ ಕಾಣಿಸುವುದಿಲ್ಲವಾದರೂ ಅದರ ಸ್ಕ್ರೀನ್ ಶಾಟ್ ಸಾಕಷ್ಟು ವೈರಲ್ ಆಗಿದೆ. ಉತ್ತಮ ಅಭಿಪ್ರಾಯವನ್ನು ಹಂಚಿಕೊಂಡು ಬಳಿಕ ಅದನ್ನು ಅಳಿಸಿ ಹಾಕಿದ್ದಕ್ಕಾಗಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸಾಮಾಜಿಕ ತಾಣದಾದ್ಯಂತ ವೈರಲ್ ಆಗುತ್ತಿರುವ ಸ್ಕ್ರೀನ್ ಶಾಟ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News