ಕೋಮುಗಲಭೆಗಳನ್ನು ಇದೀಗ ವಿದ್ಯಾ ಸಂಸ್ಥೆಗಳ ಅಂಗಳಕ್ಕೆ ತಂದಿಡಲಾಗಿದೆ: ಕವಿರಾಜ್

Update: 2022-06-27 16:58 GMT
ನಿರ್ದೇಶಕ ಕವಿರಾಜ್ 

ಬೆಂಗಳೂರು: ಶಾಲಾ ಸಮವಸ್ತ್ರ ಧರಿಸುವ ವಿಚಾರದಲ್ಲಿ ರಾಜ್ಯಾದ್ಯಂತ ಹಲವು ಶಾಲೆ-ಕಾಲೇಜುಗಳಲ್ಲಿ  ಪ್ರತಿಭಟನೆಗಳು ನಡೆದಿದ್ದು, ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಬುಧವಾರಕ್ಕೆ ಮುಂದೂಡಿದೆ. 

ಇನ್ನು ಈ ಕುರಿತು ನಿರ್ದೇಶಕ, ಸಾಹಿತಿ ಕವಿರಾಜ್ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು,  'ಕೋಮುಗಲಭೆಗಳನ್ನು ಇದೀಗ ವಿದ್ಯಾ ಸಂಸ್ಥೆಗಳ ಅಂಗಳಕ್ಕೆ ತಂದಿಡಲಾಗಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಕವಿರಾಜ್ ಅವರ ಫೇಸ್ ಬುಕ್ ಪೋಸ್ಟ್ ಇಂತಿದೆ....

ಅತ್ಯಂತ ಕೆಟ್ಟ ದಿನಗಳು.ಇದರಿಂದ ಖಂಡಿತಾ ಯಾರಿಗೂ ಒಳ್ಳೆಯದಲ್ಲ. ಇಷ್ಟು ದಿನ ಯಾವಾಗಲೋ ಅಲ್ಲೊಂದು ಇಲ್ಲೊಂದು ಕೋಮುಗಲಭೆ ಬೀದಿಯಲ್ಲಿ ನಡೆಯುತ್ತಿತ್ತು. ಇದೀಗ ಅದನ್ನು ಭವಿಷ್ಯದ ಪ್ರಜೆಗಳನ್ನು ರೂಪಿಸುವ ವಿದ್ಯಾಸಂಸ್ಥೆಗಳ ಅಂಗಳಕ್ಕೆ ತಂದಿಡಲಾಗಿದೆ. ಇದು ಖಂಡಿತವಾಗಿ ಕೇವಲ ವಿದ್ಯಾರ್ಥಿಗಳ ಸ್ವಯಂಪ್ರೇರಿತ ಹೋರಾಟ ಅಲ್ಲವೇ ಅಲ್ಲ. ಇದರ ಹಿಂದಿರುವುದು ದುಷ್ಟ ರಾಜಕೀಯ  ಮತ್ತು ಧರ್ಮಗಳ ಷಡ್ಯಂತ್ರ. ರಾಜಕೀಯಕ್ಕಾಗಿ, ವೋಟಿಗಾಗಿ ಇಡೀ ರಾಜ್ಯದ ವಿದ್ಯಾರ್ಥಿಗಳಲ್ಲಿ ಈ ಮಟ್ಟದ ದ್ವೇಷದ ವಿಷ ತುಂಬಿದರೆ ಖಂಡಿತಾ ಮುಂದೆ ವಿನಾಶದ ದುರ್ದಿನಗಳು ಕಾದಿವೆ. ಬಸವಣ್ಣ , ಕುವೆಂಪು ಹುಟ್ಟಿದ ನಮ್ಮ ರಾಜ್ಯ ದೇಶಕ್ಕೆ ಇಂತಹ‌ ಒಂದು ಹೀನ ಉದಾಹರಣೆ ಆಗಬಾರದಿತ್ತು ಎಂದು ಹೇಳಿದ್ದಾರೆ. 

''ಇದರ ಆಚೀಚೆ ಚರ್ಚೆಗೆ ಅರ್ಹವಾದ , ಪರಿಹಾರ ಹುಡುಕಬೇಕಾದ ಹಲವು ವಿಚಾರಗಳು ಇದ್ದರೂ ಒಟ್ಟಾರೆ ನನ್ನ ನಿಲುವು ಶಾಲೆಗಳಲ್ಲಿ ಸಮಾನತೆ ಮೂಡಿಸುವ ಸಮವಸ್ತ್ರದ ಪರ. ಆದರೆ ಅದೇ ಹೊತ್ತಿಗೆ ಇದನ್ನೇ ನೆಪವಾಗಿಟ್ಟುಕೊಂಡು ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮದ ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಿ ಬೀದಿಗಿಳಿಸಿ ದ್ವೇಷ ಹರಡುವ ಹುನ್ನಾರಗಳ ವಿರುದ್ಧ'' ಎಂದು ಕವಿರಾಜ್ ಇನ್ನೊಂದು ಪೋಸ್ಟ್ ನಲ್ಲಿ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News