ಧ್ವಜ ಸ್ತಂಭದ ಮೇಲೆ ಕೇಸರಿ ಧ್ವಜ ಹಾರಿಸಿದ್ದು ತಪ್ಪು: ಸಚಿವ ಆರ್.ಅಶೋಕ್
ಬೆಂಗಳೂರು, ಫೆ. 9: ‘ಧ್ವಜ ಸ್ತಂಭದ ಮೇಲೆ ಕೇಸರಿ ಧ್ವಜ ಹಾರಿಸಿದ್ದು ಸರಿಯಲ್ಲ. ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಜೊತೆಗೆ ಶಾಲೆ-ಕಾಲೇಜು ಆವರಣದಲ್ಲಿ ಹಿಜಾಬ್(ಸ್ಕಾರ್ಫ್) ಅಥವಾ ಕೇಸರಿ ಶಾಲು ಧರಿಸುವುದು ತಪ್ಪು' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಮವಸ್ತ್ರ ವಿಚಾರವಾಗಿ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಶಾಲಾ-ಕಾಲೇಜು ಆವರಣದಲ್ಲಿ ನಿಗದಿತ ಸಮವಸ್ತ್ರವನ್ನು ಎಲ್ಲ ವಿದ್ಯಾರ್ಥಿಗಳು ಧರಿಸಬೇಕು. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು' ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
‘ಈ ಕೃತ್ಯದ ಹಿಂದೆ ಪ್ರತಿಪಕ್ಷ ಕಾಂಗ್ರೆಸ್‍ನ ಷಡ್ಯಂತ್ರ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಎರಡು ವರ್ಗವಿದ್ದು, ಒಂದು ವರ್ಗ ಪ್ರೇರಣೆ ಮಾಡುತ್ತಿದ್ದರೆ ಮತ್ತೊಂದು ವರ್ಗ ಬ್ಯಾಲೆನ್ಸ್ ಮಾಡುತ್ತಿದೆ. ಕೇಸರಿ ಶಾಲು, ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಲಾಗಿದೆ. ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ' ಎಂದು ಅವರು ತಿಳಿಸಿದರು.
‘ರಾಜ್ಯ ಸರಕಾರ ಘಟನೆಯನ್ನು ನಿಭಾಯಿಸುವಲ್ಲಿ ಯಾವುದೇ ಸಂದರ್ಭದಲ್ಲಿಯೂ ವಿಫಲವಾಗಿಲ್ಲ. ಹಿಜಾಬ್ ಕುರಿತ ವಿವಾದ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸಲಾಗುತ್ತಿದೆ. ಸರಕಾರದ ಆದೇಶ ಧಿಕ್ಕರಿಸುವುದು ಸರಿಯಲ್ಲ. ಅದಕ್ಕೆ ಕಾಂಗ್ರೆಸ್ ಪ್ರಚೋದನೆ ಮಾಡುವುದು ಅಕ್ಷಮ್ಯ' ಎಂದು ಅಶೋಕ್ ಇದೇ ವೇಳೆ ಟೀಕಿಸಿದರು.
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಏನು ಬೇಕೋ ಅದನ್ನು ಹೇಳುತ್ತಾರೆ. ರಾಷ್ಟ್ರಧ್ವಜವನ್ನು ವಿದ್ಯಾರ್ಥಿಗಳು ಕೆಳಗೆ ಇಳಿಸಿಲ್ಲ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಈಗಾಗಲೇ ಸ್ಪಷ್ಟಣೆ ನೀಡಿದ್ದಾರೆ. ಆದರೂ ಡಿ.ಕೆ.ಶಿವಕುಮಾರ್ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ' ಎಂದು ಅಶೋಕ್ ಆರೋಪಿಸಿದರು.