×
Ad

ಶಿವಮೊಗ್ಗದ ಮಂತ್ರಿಯೊಬ್ಬರ ಮಗ ವಿದ್ಯಾರ್ಥಿಗಳಿಗೆ ಕೇಸರಿ ಶಾಲು, ಪೇಟಗಳನ್ನು ಹಂಚಿದ್ದಾರೆ: ಡಿ.ಕೆ.ಶಿವಕುಮಾರ್ ಆರೋಪ

Update: 2022-02-09 18:59 IST

ಬೆಂಗಳೂರು, ಫೆ.9: ರಾಷ್ಟ್ರಧ್ವಜಕ್ಕೆ ಅದರದೇ ಆದ ಕಾಯ್ದೆ ಇದೆ. ರಾಷ್ಟ್ರಧ್ವಜದ ಕಂಬದ  ಮೇಲೆ ಎಲ್ಲ ಧ್ವಜವನ್ನು ಹಾರಿಸಲು ಸಾಧ್ಯವಿಲ್ಲ. ಅದು ಸರಕಾರದ ಆಸ್ತಿ. ನನ್ನ ತಲೆ ಕಾಣಬೇಕಾದರೆ ನನ್ನ ಕೈಕಾಲುಗಳು ಇರುವಂತೆ ರಾಷ್ಟ್ರಧ್ವಜಕ್ಕೆ ಅದರ ಕಂಬ ಮುಖ್ಯ. ಇವೆರಡನ್ನೂ ಬೇರೆ ಮಾಡಲು ಸಾಧ್ಯವಿಲ್ಲ. ಅದು ಒಂದು ಉದ್ದೇಶಕ್ಕಾಗಿ ಇರುವ ಕಂಬ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಬುಧವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ನೋಡಿ ಪ್ರತಿಕ್ರಿಯೆ ನೀಡಿದ್ದೇನೆ. ಕೆಲವು ಬಾರಿ ಬೇರೆ ನಾಯಕರು ಕೊಟ್ಟಿರುವ ಹೇಳಿಕೆ ವಿಚಾರವಾಗಿ ಮಾಧ್ಯಮದವರು ಕೇಳುವ ಪ್ರಶ್ನೆಗೆ ಪ್ರತಿಕ್ರಿಯಿಸುತ್ತೇವೆ. ಮಾಧ್ಯಮದವರು ಸರಿಯಾಗಿ ಹೇಳುತ್ತಿದ್ದಾರೆ ಎಂದು ಭಾವಿಸಿ ಆ ಬಗ್ಗೆ ಪ್ರತಿಕ್ರಿಯೆ ನೀಡುತ್ತೇವೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಮಂತ್ರಿಯೊಬ್ಬರ ಮಗ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಗೂ ಪೇಟಗಳನ್ನು ಹಂಚಿದ್ದಾರೆ. ಬಿಜೆಪಿ ಕಾರ್ಯಕರ್ತರು ಈ ಕೆಲಸ ಮಾಡುತ್ತಿದ್ದಾರೆ. ನಿಮ್ಮ ರಾಜಕೀಯ ಲಾಭಕ್ಕಾಗಿ ಮಕ್ಕಳನ್ನು ಯಾಕೆ ಹಾಳು ಮಾಡುತ್ತಿದ್ದೀರಿ. ಚುನಾವಣೆ ಸಮಯ ಬಂದಾಗ ರಾಜಕಾರಣ ಮಾಡೋಣ. ಆದರೆ ಅನಗತ್ಯವಾಗಿ ಸಮಸ್ಯೆ ಸೃಷ್ಟಿಸುತ್ತಿರುವುದೇಕೆ? ಎಂದು ಅವರು ಪ್ರಶ್ನಿಸಿದರು.

ಸರಕಾರದ ಆಸ್ತಿಯಲ್ಲಿ ಈ ರೀತಿ ಬೇರೆ ಧ್ವಜ ಹಾರಿಸಿರುವುದನ್ನು ನೋಡಿಕೊಂಡು ಸರಕಾರ ಏನು ಮಾಡುತ್ತಿದೆ? ಈ ರೀತಿ ಆಗಿರುವುದು ತಪ್ಪು ಎಂದು ಸಚಿವ ಆರ್.ಅಶೋಕ್ ಒಪ್ಪಿಕೊಂಡಿರುವುದು ಅವರ ದೊಡ್ಡತನ ಎಂದು ಶಿವಕುಮಾರ್ ಹೇಳಿದರು.

ನಮ್ಮಲ್ಲಿ ಎಂತಹ ವಿಜ್ಞಾನಿಗಳು, ವಿದ್ಯಾವಂತರು ತಯಾರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನು ತಯಾರು ಮಾಡಬೇಕೇ ಹೊರತು ಅವರಲ್ಲಿ ಜಾತಿ, ಧರ್ಮದ ನಡುವಣ ದ್ವೇಷದ ವಿಷಬೀಜ ಬಿತ್ತುವುದಲ್ಲ. ಈ ವಿಚಾರದ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಮುಂದೆ ಮಾನಸಿಕವಾಗಿ ಬಹಳ ನೊಂದುಕೊಳ್ಳುತ್ತಾರೆ ಎಂದು ಶಿವಕುಮಾರ್ ಹೇಳಿದರು.

ಈ ವಿವಾದದ ಹಿಂದೆ ಕಾಂಗ್ರೆಸ್ ಪಿತೂರಿ ಇದೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ವಿರೋಧ ಪಕ್ಷದ ಅಧ್ಯಕ್ಷ. ಬಿಜೆಪಿಯವರು ನಮ್ಮ ಮೇಲೆ ಆರೋಪ ಮಾಡುತ್ತಾರೆ. ಪಿತೂರಿ ಯಾರು ಎಲ್ಲಿಂದ ಮಾಡುತ್ತಿದ್ದಾರೆ, ಮಂಡ್ಯ, ಶಿವಮೊಗ್ಗ, ಬೇರೆ ಕಡೆಗಳಲ್ಲಿ ಪಿತೂರಿ ಮಾಡುತ್ತಿರುವವರು ಯಾರು? ಎಂದು ಪ್ರಶ್ನಿಸಿದರು.

ವಿದ್ಯಾರ್ಥಿಗಳು ಕೇಸರಿ ಶಾಲು, ಪೇಟವನ್ನು ಅವರ ಮನೆಯಿಂದ ತಂದಿದ್ರಾ? ಅವರೇನು ಕಾಸು ಕೊಟ್ಟು ಖರೀದಿಸಿದ್ರಾ? ಅವುಗಳನ್ನು ಹೇಗೆ ಹಂಚುತ್ತಿದ್ದರು ಎಂಬುದನ್ನು ಮಾಧ್ಯಮಗಳಲ್ಲೇ ನೋಡಿದ್ದೇವೆ. ಸೂರತ್‍ನಿಂದ 50 ಲಕ್ಷ ಕೇಸರಿ ಶಾಲುಗಳನ್ನು ತರಿಸಲಾಗಿದೆ. ಇದೆಲ್ಲ ನಮಗೆ ಗೊತ್ತಿಲ್ಲವೇ? ಈ ಶಾಲುಗಳನ್ನು ಸರಬರಾಜು ಮಾಡುತ್ತಿರುವವರು ಯಾರು? ಎಂಬುದರ ಬಗ್ಗೆ ನಮಗೂ ಗೊತ್ತಿದೆ. ನಮಗೂ ಸಾಕಷ್ಟು ಲಿಂಕ್‍ಗಳಿದ್ದು, ಎಲ್ಲ ಮಾಹಿತಿಗಳು ಗೊತ್ತಾಗುತ್ತವೆ’ ಎಂದು ಅವರು ಹೇಳಿದರು.

ಕೇಸರಿ ಶಾಲು ಹಾಗೂ ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ರಾಷ್ಟ್ರ ಧ್ವಜ ಹಾಗೂ ಸಂವಿಧಾನ ನಮ್ಮ ಧರ್ಮ. ಸಂವಿಧಾನ ನಮ್ಮ ಪಾಲಿಗೆ ಭಗವದ್ಗೀತೆ, ಕುರ್‍ಆನ್ ಹಾಗೂ ಬೈಬಲ್ ಆಗಿದೆ. ಇದೇ ನಮ್ಮ ನಿಲುವು. ನಾವು ಶಾಸಕರಾಗಿ ಅಧಿಕಾರ ಸ್ವೀಕರಿಸುವಾಗ ಮಾಡಿದ ಪ್ರಮಾಣವನ್ನು ನಾನು ಪಾಲಿಸುತ್ತೇನೆ ಎಂದರು.

ನಾನು ಒಬ್ಬ ಹಿಂದೂ ಆಗಿ ಎಲ್ಲ ಧರ್ಮದವರಿಗೆ ಗೌರವ ನೀಡಬೇಕು. ನಾನು ಹಿಂದು. ಹಾಗೆಂದು ನಾನು ಹುಟ್ಟುವಾಗ ಅರ್ಜಿ ಹಾಕಿಕೊಂಡು ಹುಟ್ಟಿರಲಿಲ್ಲ. ಅವರವರು ಅವರ ಧರ್ಮಕ್ಕೆ ಗೌರವ ಕೊಡಬೇಕು. ನಾನು ದಿನಬೆಳಗಾದರೆ ದೇವರಿಗೆ ನಮಸ್ಕಾರ ಮಾಡಿ, ಹಣೆಗೆ ಕುಂಕುಮ, ವಿಭೂತಿ, ಗಂಧ ಇಟ್ಟುಕೊಳ್ಳುತ್ತೇನೆ. ಕೆಲವರು ನೀನು ಕುಂಕುಮ ಹಾಕಬೇಡ, ಓಲೆ ಹಾಕಬೇಡ, ಮೂಗುತಿ ಹಾಕಬೇಡ ಎಂದರೆ ಹೇಗೆ?’ ಎಂದು ಅವರು ಹೇಳಿದರು.

ಮಹಿಳೆಯರ ಉಡುಪು ಅವರ ಇಚ್ಛೇ ಎಂಬ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಕೊಟ್ಟಿರುವ ಹಕ್ಕಿನ ಬಗ್ಗೆ ಅವರು ಮಾತನಾಡಿದ್ದಾರೆ’ ಎಂದು ಉತ್ತರಿಸಿದರು.
ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಆ ಮುತ್ತುರಾಜನ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ಪತ್ರಕರ್ತರು ಮುತ್ತುರಾಜ ಎಂದರೆ ರಾಜಕುಮಾರ್ ಎಂದು ಆಗುವುದಿಲ್ಲವೇ ಎಂಬ ಪ್ರಶ್ನೆ ಕೇಳಿದಾಗ, ‘ನಾನು ಹೇಳಿದ್ದು ನಮ್ಮ ಪಕ್ಕದ ಮನೆಯ ಡಾ.ರಾಜಕುಮಾರ್ ಅವರ ಬಗ್ಗೆ ಅಲ್ಲ. ಬಿಜೆಪಿಯ ರಾಜಕುಮಾರ, ಬಿಜೆಪಿಯ ಮುತ್ತುರಾಜನ ಬಗ್ಗೆ ಎಂದು ಉತ್ತರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News