5 ಲಕ್ಷ ರೂ. ಬಹುಮಾನ ಘೋಷಣೆ: ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಹೇಳಿದ್ದೇನು?
ಮಂಡ್ಯ: ರಾಜ್ಯದ ಶಾಲೆ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದು, ಮಂಗಳವಾರ ಹಲವು ಕಡೆಗಳಲ್ಲಿ ಕಲ್ಲು ತೂರಾಟ, ಘರ್ಷಣೆಗಳು ನಡೆದಿದೆ. ಈ ನಡುವೆ ಮಂಡ್ಯದ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ನೂರಾರು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾಗಿದ್ದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಂತರದ ಬೆಳವಣಿಗೆಯಲ್ಲಿ ವಿದ್ಯಾರ್ಥಿನಿಗೆ ವ್ಯಕ್ತಿಯೋರ್ವರು 5 ಲಕ್ಷ ರೂ ಘೋಷಿಸಿರುವ ಬಗ್ಗೆ ಸುದ್ದಿಯಾಗಿತ್ತು.
ಘಟನೆ ಬಳಿಕ ದೇಶಾದ್ಯಂತ ಸುದ್ದಿಯಾಗಿದ್ದ ವಿದ್ಯಾರ್ಥಿನಿಯನ್ನು ಹಲವು ಗಣ್ಯರು ಪ್ರಶಂಸಿಸಿದ್ದರು. ಇದೇ ವೇಳೆ ವ್ಯಕ್ತಿಯೋರ್ವರು 5 ಲಕ್ಷ ರೂ ಬಹುಮಾನ ಘೋಷಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕೆಲವು ಮಾಧ್ಯಮಗಳು ವರದಿ ಮಾಡಿತ್ತು.
ಈ ಕುರಿತು ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಪ್ರತಿಕ್ರಿಯಿಸಿದ್ದು, 5 ಲಕ್ಷ ರೂ ಬಹುಮಾನದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿರುವ ಅವರು, ಈ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ, ಈ ರೀತಿಯ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಇದರ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದು ವಿದ್ಯಾರ್ಥಿನಿ ಸ್ಪಷ್ಟಪಡಿಸಿದ್ದಾರೆ.
ಘಟನೆ ಸಂದರ್ಭದಲ್ಲಿ ನನ್ನ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ನನಗೆ ರಕ್ಷಣೆ ನೀಡಿದ್ದಾರೆ ಎಂದ ವಿದ್ಯಾರ್ಥಿನಿ, ಹಿಜಾಬ್ ಧರಿಸುವ ಕುರಿತು ಸರಕಾರದ ಆದೇಶದ ವಿಷಯ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ತೀರ್ಪು ಏನು ಬರುತ್ತೋ ನೋಡೋಣ. ಸದ್ಯಕ್ಕಂತೂ ನಾನು ಹಿಜಾಬ್ ತೆಗೆಯುವುದಿಲ್ಲ. ಅದು ನನ್ನ ಆದ್ಯತೆ ಎಂದು ಮುಸ್ಕಾನ್ ಹೇಳಿದ್ದಾರೆ.
ಮಂಡ್ಯ ನಗರದ ಹೆದ್ದಾರಿ ಪಕ್ಕದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಆವರಣದಲ್ಲಿ ಜೈ ಶ್ರೀರಾಂ ಎಂದು ಘೋಷಣೆ ಕೂಗಿದ್ದಾರೆ. ಇದೇ ವೇಳೆ ಕಾಲೇಜಿಗೆ ಆಗಮಿಸಿದ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿ ಮುಸ್ಕಾನ್ ಸ್ಕೂಟರ್ ನಿಲ್ಲಿಸಿ ತರಗತಿಗೆ ತೆರಳುತ್ತಿದ್ದಾಗ ಕೇಸರಿ ಶಾಲು ವಿದ್ಯಾರ್ಥಿಗಳು ತಮ್ಮ ಘೋಷಣೆ ತೀವ್ರಗೊಳಿಸಿ ಆಕೆಯನ್ನು ಸುತ್ತುವರಿಯಲು ಯತ್ನಿಸಿದಾಗ ವಿದ್ಯಾರ್ಥಿನಿ ಆತಂಕಕ್ಕೆ ಒಳಗಾಗದೆ ಅವರ ವಿರುದ್ಧ ಪ್ರತಿಭಟಸಿದ್ದಾಳೆ. ಈ ವೀಡಿಯೋ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದೆ.