ಮಂಡ್ಯ: ಒಂದೇ ಕುಟುಂಬದ ಐವರ ಕೊಲೆ ಪ್ರಕರಣ; ಪೊಲೀಸರಿಂದ ಆರೋಪಿ ಮಹಿಳೆಯ ಬಂಧನ

Update: 2022-02-09 16:06 GMT
ಆರೋಪಿ ಲಕ್ಷ್ಮಿ                                        ಘಟನೆ ನಡೆದ ಸ್ಥಳ 

ಮಂಡ್ಯ, ಫೆ.9: ಶ್ರೀರಂಗಪಟ್ಟಣ ತಾಲೂಕು ಕೆಆರ್ ಎಸ್ ಗ್ರಾಮದ ಬಝಾರ್ ಲೈನ್ ಬಡಾವಣೆಯಲ್ಲಿ ಫೆ.6ರ ತಡರಾತ್ರಿ ನಡೆದಿದ್ದ ಒಂದೇ ಕುಟುಂಬದ ಐವರ ಬರ್ಬರ ಕೊಲೆ ಪ್ರಕರವನ್ನು ಬೇಧಿಸಿರುವ ಪೊಲೀಸರ ತಂಡ ಈ ಸಂಬಂಧ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.

ಕೊಲೆಯಾದ ಗಂಗಾರಾಂ ಪತ್ನಿ ಲಕ್ಷ್ಮಿ ಚಿಕ್ಕಪ್ಪನ ಮಗಳಾದ ಮೈಸೂರಿನ ಬೆಲವತ್ತ ಗ್ರಾಮದ ನಿವಾಸಿ ಲಕ್ಷ್ಮಿ(30) ಬಂಧಿತ ಆರೋಪಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಆರೋಪಿಯು ಕೊಲೆಯಾದ ಮಹಿಳೆಯ ಪತಿ ಗಂಗಾರಾಂನೊಂದಿಗೆ ಸಲುಗೆಯಿಂದ ಇದ್ದು, ಗಂಗಾರಾಂ ಹೆಂಡತಿ ಆಕೆಯ ದಾರಿಗೆ ಅಡ್ಡವಾಗಿದ್ದಳು. ಆಕೆಯನ್ನು ಗಂಡನಿಂದ ದೂರಮಾಡಲು ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯ ತರುವ ಯತ್ನ ಸಫಲವಾಗದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿರುತ್ತಾಳೆ' ಎಂದು ಅವರು ಮಾಹಿತಿ ನೀಡಿದರು.

ತನ್ನ ಗ್ರಾಮವಾದ ಬೆಲವತ್ತದಿಂದ ಮಚ್ಚಿನೊಂದಿಗೆ ಕೆ.ಆರ್.ಸಾಗರದ ಗಂಗಾರಾಂ ಮನೆಗೆ ಬಂದಿದ್ದು, ಆತನ ಪತ್ನಿ ನಡುವೆ ವಾಗ್ವಾದಗಳು ತಡರಾತ್ರಿವರೆಗೆ ನಡೆದು ಮೊದಲೇ ನಿರ್ಧರಿಸಿದಂತೆ ಗಂಗಾರಾಂ ಪತ್ನಿಗೆ ಸುತ್ತಿಗೆ ಮತ್ತು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾಳೆ ಎಂದು ವಿವರಿಸಿದರು.

ಈ ವೇಳೆಗೆ ಮಲಗಿದ್ದ ಮಕ್ಕಳು ಒಂದೊಂದಾಗಿ ಎಚ್ಚರಗೊಂಡು ಆರೋಪಿ ಮಹಿಳೆಯನ್ನು ಗುರುತಿಸಿದಾಗ ತನ್ನ ಗುರುತು ಹಿಡಿದ ಮಕ್ಕಳನ್ನೂ ಆರೋಪಿ ಮಹಿಳೆ ತಾನು ತಂದಿದ್ದ ಆಯುಧದಿಂದ ಎಲ್ಲರಿಗೂ ತಲೆ ಮೇಲೆ ಹೊಡೆದು ಒಟ್ಟು 5 ಜನರನ್ನು ಕೊಲೆ ಮಾಡಿದ್ದಾಳೆ ಎಂದು ಅವರು ಹೇಳಿದರು.

ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಕೊಲೆಯಾದವರ ಮೈಮೇಲೆ ಬ್ಲಾಂಕೇಟ್ ಹೊದಿಸಿ ಮನೆಯ ಗಾಡ್ರೇಜನ್ನು ತೆರೆದು ಕಳ್ಳತನಕ್ಕೆ ಬಂದವರ ಕೃತ್ಯವೆಂದು ನಂಬಿಕೆ ಬರುವಂತೆ ಬಟ್ಟೆಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಮನೆಯ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿ ತೆರಳಿದ್ದಳು. ಖಚಿತ ಪುರಾವೆ ಆಧಾರದ ಮೇಲೆ ಆಕೆಯನ್ನು ದಸ್ತಗಿರಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಈ ಪ್ರಕರಣ ಬೇಧಿಸಿದ ಶ್ರೀರಂಗಪಟ್ಟಣ ಉಪವಿಭಾಗದ ಡಿವೈಎಸ್ಪಿ ಸಂದೇಶ್‍ಕುಮಾರ್ ನೇತೃತ್ವದ ತನಿಖಾ ತಂಡವನ್ನು ಎಸ್ಪಿ ಯತೀಶ್ ಅಭಿನಂದಿಸಿ ಪ್ರಶಂಸಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್ ಉಪಸ್ಥಿತರಿದ್ದರು.

ಫೆ.6ರ ತಡರಾತ್ರಿ ಕೆಆರ್ ಎಸ್ ಗ್ರಾಮದ ಬಝಾರ್ ಲೈನ್ ಬಡಾವಣೆಯ ಗಂಗಾರಾಂ ಪತ್ನಿ ಲಕ್ಷ್ಮಿ(26), ಆಕೆಯ ಮಕ್ಕಳಾದ ರಾಜ್(12), ಕೋಮಲ್(7), ಕುನಾಲ್(4) ಹಾಗು ಗಂಗಾರಾಂ ಸೋದರ ಗಣೇಶನ ಮಗ ಗೋವಿಂದ(8) ಅವರನ್ನು ಕೊಲೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News