ಪೀಣ್ಯ ಇಂಡಸ್ಟ್ರೀಯಲ್ ಏರಿಯಾದಿಂದ ಒಂದು ಲಕ್ಷ ಕೇಸರಿ ಶಾಲು, ಪೇಟ ರವಾನೆಯಾಗಿದೆ: ಎಂ.ಲಕ್ಷ್ಮಣ್ ಗಂಭೀರ ಆರೋಪ

Update: 2022-02-09 15:13 GMT

ಮೈಸೂರು,ಫೆ,9: ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಬಿಜೆಪಿಯ ಕೈವಾಡ ಇದೆ. ಈ ಸಂಬಂಧ ಮೂರು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ  ಮಾತನಾಡಿದ ಅವರು, ''ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ಒಂದು ಲಕ್ಷ ಕೇಸರಿ ಶಾಲು, ಪೇಟ ರವಾನೆ ಆಗಿದೆ. ಇದನ್ನು ಆರ್ಡರ್ ಮಾಡಿದ್ದು ಯಾರು? ಈ ಸಂಬಂಧ ಮೂರು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ'' ಎಂದು ತಿಳಿಸಿದ್ದಾರೆ.

ದೇಶದ ನಂಬರ್ ಒನ್ ರಾಜ್ಯ ಕರ್ನಾಟಕವನ್ನು ಬಿಜೆಪಿ ಹಾಳು ಮಾಡುತ್ತದೆ. ಮೂರು ಜನ ವಿದ್ಯಾರ್ಥಿಗಳು ಕಲ್ಲು ಹೊಡಿಯುತ್ತಾರೆ ಅಂತಾ ಶಾಲೆ, ಕಾಲೇಜಿಗೆ ರಜೆ ಕೊಡ್ತೀರಾ. ನಾಳೆ ಮತ್ತೊಬ್ಬ ಕಲ್ಲು ಹೊಡೆಯುತ್ತಾನೆ ಮತ್ತೆ ರಜೆ ಕೊಡ್ತೀರಾ? ಯಾರು ಕಲ್ಲು ಹೊಡೆದ್ರು ಅವರನ್ನು ಹೊದ್ದು ಒಳಗೆ ಹಾಕೋದು ಬಿಟ್ಟು ರಜೆ ಕೊಡುತ್ತೀರ. ಎಲ್ಲಿದ್ದೀರಾ ಪೊಲೀಸ್ ನಿರ್ದೇಶಕ ಪ್ರವೀಣ್ ಸೂದ್? ಮಕ್ಕಳು ಕೇಸರಿ ಶಾಲು ಹಾಕಿದ್ದಾರೆ ಅಂತಾ ನೀವು ಹೋಗಿಲ್ವ. ಮುಸ್ಲಿಂ ಪ್ರತಿಭಟನೆ ಆದರೆ ಮುಂದೆ ಬರ್ತಿರಾ. ಮಂಡ್ಯದಲ್ಲಿ ನಿನ್ನೆ ಅಷ್ಟೊಂದು ಗಲಾಟೆ ಆಗಿದೆ. ಕನಿಷ್ಠ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಜಾಬ್ ಇದೊಂದು ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮ. ಕಾಂಗ್ರೆಸ್ ಗೂ ಇದಕ್ಕೂ ಸಂಬಂಧ ಇಲ್ಲ ಎಂದು ಲಕ್ಷ್ಮಣ್ ಅವರು ಬಿಜೆಪಿಯವರ ಹೇಳಿಕೆಗೆ  ತಿರುಗೇಟು ನೀಡಿದ್ದಾರೆ.

ದೇಶವೇ ತಲೆ ತಗ್ಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ವಿದ್ಯಾರ್ಥಿಗಳ ಮೈಂಡ್ ನಲ್ಲಿ ಕೋಮುವಾದವನ್ನು ಬಿತ್ತುತ್ತಿದೆ. ಇವರಿಗೆ ಅಧಿಕಾರವೇ ಮುಖ್ಯವಾಗಿದೆ. 9.10 ನೇ ತರಗತಿಯ ಮಕ್ಕಳಲ್ಲಿ ಕೋಮುವಾದ ಹಬ್ಬಿಸುತ್ತಿದ್ದಾರೆ. ನಿಮಗೆ ನಾಚಿಕೆ ಅಗೋದಿಲ್ಲವಾ ಎಂದು ಪ್ರಶ್ನಿಸಿದರು.

ಹಿಜಾಬ್ ಸಂಸ್ಕೃತಿ ಕೇವಲ ಮುಸ್ಲಿಂರಿಗೆ ಮಾತ್ರ ಇಲ್ಲ. ನಮ್ಮ ಹೆಣ್ಣುಮಕ್ಕಳು ಸೆರಗನ್ನು ಹಾಕಿಕೊಳ್ಳುವ ಪದ್ದತಿ ಹಿಂದೂ ಸಮುದಾಯದಲ್ಲೂ ಇದೆ. ನಾರಾಯಣ ಗುರು ಸ್ತಬ್ಧಚಿತ್ರದ ವಿಚಾರ ಮುಚ್ಚಿ ಹಾಕಲು ಈ ವಿವಾದ ಸೃಷ್ಟಿ ಮಾಡಿದ್ದಾರೆ.

ಎಲ್ಲಿ ಬಿಜೆಪಿ ವೀಕ್ ಇದಿಯೋ ಅಂತಹ ಕಡೆ ಈ ರೀತಿಯ ವಿವಾದ ಮಾಡುತ್ತಿದೆ ಎಂದು ಆರೋಪಿಸಿದರು. ರಘುಪತಿ ಭಟ್. ಪ್ರತಾಪ್ ಸಿಂಹ, ಸಿಟಿ ರವಿ ವಿವಾದವನ್ನು ಹೆಚ್ಚು ಮಾಡುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು, ಇದು ನಮ್ಮ ತಾತನದ್ದೇ ದೇಶ, ತನ್ವೀರ್ ಸೇಠ ತಾತಾ ಕೂಡ ಹಿಂದೂ ಆಗಿದ್ದರು ಎಂಬ ಹೇಳಿಕೆ ನೀಡಿದ್ದಾರೆ. ನೆನ್ನೆ ಮಂಡ್ಯದಲ್ಲಿ ಹೆಣ್ಣು ಮಗುವೊಂದನ್ನು ನೂರಾರು ಜನ ಅಟ್ಯಾಕ್ ಮಾಡುವುದು ಎಷ್ಟರ ಮಟ್ಟಿಗೆ ಸರಿ.? ನಿನ್ನೆಯ ಘಟನೆ ಬಗ್ಗೆ ಪ್ರತಾಪ್ ಸಿಂಹ ಟ್ವಿಟ್ ಮಾಡಿ ಡಿಲೀಟ್ ಮಾಡುತ್ತಾರೆ. ಯಾಕೆ ಹೀಗೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News