×
Ad

ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿ ಸಮುದಾಯದ ಭವಿಷ್ಯ ನಾಶ ಮಾಡಲು ಪ್ರಯತ್ನಿಸುತ್ತಿವೆ: ಸುರ್ಜೇವಾಲ

Update: 2022-02-09 22:37 IST

ಬೆಂಗಳೂರು, ಫೆ.9: ಕೋವಿಡ್ ಪಿಡುಗು ಹಾಗೂ ಈ ಸವಾಲು ನಿಭಾಯಿಸುವಲ್ಲಿ ಬಿಜೆಪಿ ಸರಕಾರದ ಅಸಮರ್ಥತೆ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಜ್ಞಾನ ಸಂಪಾದನೆಗೆ ಧಕ್ಕೆಯುಂಟಾಗಿದೆ. ಮುಂದಿನ ದಿನಗಳಲ್ಲಿ ಪರೀಕ್ಷೆಗಳು ಎದುರಾಗುತ್ತಿದ್ದು, ಅದರಲ್ಲೂ ಪಿಯುಸಿ ಪರೀಕ್ಷೆ ಬಹಳ ಪ್ರಮುಖವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯದ ವಿದ್ಯಾರ್ಥಿಗಳಿಗೆ ಬಹಿರಂಗ ಪತ್ರ ಬರೆದಿರುವ ಅವರು, ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಾಗ, ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿಗಳ ನಡುವೆ ವೈಷಮ್ಯ ಸೃಷ್ಟಿಸಿ ಅವರ ಕೈಗೆ ಚಾಕು, ಚೂರಿ, ಕಲ್ಲುಗಳನ್ನು ಕೊಟ್ಟು ರಾಜ್ಯದ ವಿದ್ಯಾರ್ಥಿ ಸಮುದಾಯದ ಭವಿಷ್ಯವನ್ನು ನಾಶ ಮಾಡಲು ಪ್ರಯತ್ನಿಸುತ್ತಿವೆ ಎಂದು ಕಿಡಿಗಾರಿದ್ದಾರೆ. 

ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಅತ್ಯಂತ ಪ್ರಬಲ ಅಸ್ತ್ರ. ದಯವಿಟ್ಟು ಇದನ್ನು ಮನದಟ್ಟು ಮಾಡಿಕೊಳ್ಳಿ. ನಿಮ್ಮ ಶೈಕ್ಷಣಿಕ ಜೀವನ ಆರಂಭವಾಗುವ ಮುನ್ನವೇ ಅದನ್ನು ಅಂತ್ಯಗೊಳಿಸಲಾಗುತ್ತಿದೆ. ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರಕಾರವು ತನ್ನ ರಾಜಕೀಯ ದುರುದ್ದೇಶಕ್ಕೆ ರಾಜ್ಯದ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಬಿರುಕು ಮೂಡಿಸಿ ಅವರ ಏಕತೆಯನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಅವರು ದೂರಿದ್ದಾರೆ. 

ಶೇ.40ರಷ್ಟು ಕಮಿಷನ್, ಕ್ರಿಪ್ಟೋ  ಕರೆನ್ಸಿ ಹಗರಣ, ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಬದಲಾವಣೆಗೆಗಾಗಿ ಆಂತರಿಕ ಕಚ್ಚಾಟದಲ್ಲಿ ಮುಳುಗಿರುವ ಬಿಜೆಪಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬೇರೆ ದಾರಿ ಇಲ್ಲದೆ ಜನರ ಗಮನ ಬೇರೆಡೆಗೆ ಸೆಳೆಯಲು ನಮ್ಮ ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದೆ ಎಂದು ಸುರ್ಜೆವಾಲ ಹೇಳಿದ್ದಾರೆ.

ಈ ದುರ್ಮಾರ್ಗಕ್ಕೆ ವಿದ್ಯಾರ್ಥಿಗಳು ಹಾಗೂ ನಮ್ಮ ಮಕ್ಕಳು ಸಿಲುಕಿದರೆ, ಬಿಜೆಪಿಯ ರಾಜಕೀಯ ಹಿತಾಸಕ್ತಿಗೆ ನಿಮ್ಮ ಭವಿಷ್ಯ ನಿರ್ನಾಮವಾಗಲಿದೆ. ಜತೆಗೆ ಸಂವಿಧಾನದಲ್ಲಿ ನೀಡಲಾಗಿರುವ ಸ್ವಾತಂತ್ರ್ಯ ಹಾಗೂ ಸಮಾನತೆ ಅರ್ಥಹೀನವಾಗಲಿದೆ. ಬಿಜೆಪಿಯ ದ್ವೇಷದ ಅಜೆಂಡಾವನ್ನು ಧಿಕ್ಕರಿಸಿ ನಾವೆಲ್ಲರೂ ಒಬ್ಬರ ಕೈ ಒಬ್ಬರು ಹಿಡಿದು ಸ್ನೇಹಿತರಾಗಿ ಒಟ್ಟಿಗೆ ಸಾಗೋಣ, ನಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳೋಣ ಎಂದು ಅವರು ಕರೆ ನೀಡಿದ್ದಾರೆ.

ಶಂಕರಾಚಾರ್ಯ, ರಾಮಾನುಜಾ ಹಾಗೂ ಬಸವಣ್ಣನ ನಾಡಿನಲ್ಲಿ ಸಾವಿರಾರು ವರ್ಷಗಳಿಂದ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಬೌದ್ಧರು, ಪಾರ್ಸಿಗಳು ಒಟ್ಟಾಗಿ ಬಾಳುತ್ತಿದ್ದಾರೆ. ನಾವು ಒಬ್ಬರ ಆಚಾರ, ವಿಚಾರ, ಸಂಪ್ರದಾಯಗಳನ್ನು ಮತ್ತೊಬ್ಬರು ಹೆಮ್ಮೆಯಿಂದ ಗೌರವಿಸುತ್ತಾ ಬಂದಿದ್ದೇವೆ ಎಂದು ಸುರ್ಜೇವಾಲ ಹೇಳಿದ್ದಾರೆ.

ಕೆಲವೇ ಕೆಲವು ದುಷ್ಟರ ಸ್ವಹಿತಾಸಕ್ತಿಗಾಗಿ ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ ಎಂದು ನಮ್ಮ ವಿದ್ಯಾರ್ಥಿಗಳು, ಮಕ್ಕಳು ಹಾಗೂ ಅವರ ಪೋಷಕರಲ್ಲಿ ನಾನು ಮನವಿ ಮಾಡುತ್ತೇನೆ. ಈ ದುಷ್ಟರಿಗೆ ನಿಮ್ಮ ಭವಿಷ್ಯ, ಶಿಕ್ಷಣ, ಉಜ್ವಲ ಭವಿಷ್ಯದ ಬಗ್ಗೆ ಆಸಕ್ತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಬದಲಿಗೆ ಅವರಿಗೆ ತಮ್ಮ ರಾಜಕೀಯ ಹಿತಾಸಕ್ತಿ ಮಾತ್ರ ಮುಖ್ಯವಾಗಿವೆ. ವಿವಿಧತೆಯಲ್ಲಿ ಏಕತೆ ಎಂಬ ತತ್ವವನ್ನು ಎತ್ತಿ ಹಿಡಿದು ನಾವೆಲ್ಲರೂ ಒಂದಾಗಿ ಶಿಕ್ಷಣದ ಬಗ್ಗೆ ಗಮನಹರಿಸಿ ನಮ್ಮ ರಾಜ್ಯ ಹಾಗೂ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸೋಣ ಎಂದು ಸುರ್ಜೇವಾಲ ಕರೆ ನೀಡಿದ್ದಾರೆ.

ನಾನು ನಿಮ್ಮ ಹಿತೈಷಿಯಾಗಿ, ವಿದ್ಯಾರ್ಥಿ ಹೋರಾಟಗಾರನಾಗಿ, ಭಾರತದ ಪ್ರಾಚೀನ ವಿಶ್ವವಿದ್ಯಾಲಯವಾಗಿರುವ ಪಂಜಾಬ್ ವಿವಿಯ ಸೆನೆಟ್, ಸಿಂಡಿಕೇಟ್ ಸದಸ್ಯನಾಗಿ, ಆಡಳಿತಗಾರನಾಗಿ ನನಗಿರುವ ಸುದೀರ್ಘ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ. ನಿಮ್ಮೆಲ್ಲರಿಗೂ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News