ಕೇಸರಿ ಧ್ವಜ ಹಂಚಿಕೆ ನನ್ನ ಸ್ವಾತಂತ್ರ್ಯ, ಅದನ್ನು ಪ್ರಶ್ನಿಸಲು ಡಿಕೆಶಿ ಯಾರು?: ಸಚಿವ ಕೆ.ಎಸ್.ಈಶ್ವರಪ್ಪ

Update: 2022-02-09 17:54 GMT

ಬೆಂಗಳೂರು, ಫೆ. 9: ದಿಲ್ಲಿಯ ಕೆಂಪುಕೊಟೆಯ ಮೇಲೆ ಇಂದಲ್ಲ ನಾಳೆ ನಾವು ಕೇಸರಿ ಧ್ವಜವನ್ನು ಹಾರಿಸುತ್ತೇವೆ. ಈ ಬಗ್ಗೆ ಯಾರಿಗೂ ಸಂಶಯಬೇಡ. ಕೇಸರಿ ಧ್ವಜ ಹಂಚಿಕೆ ಮಾಡಲು ನನಗೆ ನನ್ನದೆ ಆದ ಸ್ವಾತಂತ್ರ್ಯವಿದೆ. ಅದನ್ನು ಪ್ರಶ್ನಿಸಲು ಬಂಡೆ ಲೂಟಿಗೈದ ಡಿ.ಕೆ.ಶಿವಕುಮಾರ್ ಯಾರು? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಷ್ಟೇ ಸುಳ್ಳುಗಾರ ಎಂದುಕೊಂಡಿದ್ದೆ. ಆದರೆ, ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೊಡ್ಡ ಸುಳ್ಳುಗಾರ ಎಂದು ಸಾಬೀತಾಗಿದೆ. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜವನ್ನು ಹಾರಿಸಿಲ್ಲ. ವಿದ್ಯಾರ್ಥಿಗಳು ಅಥವಾ ಬೇರೆ ಯಾರೇ ಕೇಸರಿ ಧ್ವಜ ಹಾರಿಸಿದರೆ ತಪ್ಪೇನು' ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮುಂದೊಂದು ದಿನ ಭಗವಧ್ವಜವೇ ರಾಷ್ಟ್ರ ಧ್ವಜ ಆಗಬಹುದು: ಸಚಿವ ಈಶ್ವರಪ್ಪ

ಕೇಸರಿ ಎಂದರೆ ಸಿದ್ದರಾಮಯ್ಯನವರಿಗೆ ಹೊಟ್ಟೆ ತಳಮಳ ಆರಂಭವಾಗಲಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ಟಿಪ್ಪು ಸುಲ್ತಾನ್ ಟೋಪಿಯೇ ಬೇಕು. ಕ್ರೈಸ್ತ ಸಮುದಾಯದ ಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ಹಿಜಾಬ್(ಸ್ಕಾರ್ಫ್) ಧರಿಸಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಅವರು ಎಂದೂ ಪ್ರಶ್ನೆ ಮಾಡುವುದಿಲ್ಲ' ಎಂದು ವಾಗ್ದಾಳಿ ನಡೆಸಿದರು.

ನಾನು ಶಿವಮೊಗ್ಗದಲ್ಲಿ ಕೇಸರಿ ಶಾಲು ಹಂಚಿದ್ದೇನೆ. ಅಥವಾ ಹಂಚಿಕೆ ಮಾಡಿಲ್ಲ ಎಂದು ಹೇಳುವುದಿಲ್ಲ. ಆದರೆ, ನನಗೆ ಕೇಸರಿ ಶಾಲು ಹಂಚಿಕೆ ಮಾಡುವುದು ನನ್ನ ಸ್ವಾತಂತ್ರ್ಯ ಅದನ್ನು ಪ್ರಶ್ನಿಸಲು ಡಿ.ಕೆ.ಶಿವಕುಮಾರ್ ಅವರು ಯಾರು? ಅವರಿಗೆ ನಾನೇಕೆ ಉತ್ತರ ನೀಡಬೇಕು. ಬಂಡೆ ಲೂಟಿಕೋರ ಡಿ.ಕೆ.ಶಿವಕುಮಾರ್, ತಿಹಾರ್ ಜೈಲಿಗೆ ಹೋಗಿಬಂದಿದ್ದಾರೆ. ನನ್ನನ್ನು ಪ್ರಶ್ನೆ ಮಾಡಲು ಅವರಿಗೆ ಅಧಿಕಾರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲುಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಕನೀಝ್ ಫಾತಿಮಾ ಅವರು ಹುಜಾಬ್ ಧರಿಸಿಯೇ ವಿಧಾನಸಭೆಗೆ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದ್ದಾರೆ. ಮಹಿಳೆಯರು ಎಲ್ಲ ಕಡೆಗಳಲ್ಲಿ ಹಿಜಾಬ್ ಧರಿಸಿಕೊಂಡು ಹೋಗಲು ಅವಕಾಶವಿದೆ. ಆದರೆ, ಶಾಲೆಗಳಿಗೆ ಮಾತ್ರ ಸಮವಸ್ತ್ರ ಧರಿಸಿಯೇ ಬರಬೇಕೆಂಬ ನಿಯಮವಿದೆ. ಶಿವಕುಮಾರ್ ಅವರಿಗೆ ತಾಕತ್ತಿದ್ದರೆ ಆ ಮಹಿಳೆಯರನ್ನು ಮಸೀದಿಗೆ ಕರೆದುಕೊಂಡು ಹೋಗಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಹೊರಟಿದ್ದು, ಆ ಮೂಲಕ ಮುಸ್ಲಿಮರ ಮತಗಳನ್ನು ಪಡೆಯುವ ಯತ್ನ ಮಾಡುತ್ತಿದೆ. ವಿದ್ಯಾರ್ಥಿಗಳನ್ನು ಶಿಕ್ಷಣ ಪಡೆಯಲು ಬಿಡಿ, ಸಮವಸ್ತ್ರ ಧರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ ಅವರು, ರಾಷ್ಟ್ರ ಧ್ವಜವನ್ನು ಎಲ್ಲ ದೇಶ ಭಕ್ತರು ಒಪ್ಪಿಕೊಂಡಿದ್ದು, ಅದಕ್ಕೆ ಎಲ್ಲರೂ ಗೌರವವನ್ನು ನೀಡುತ್ತೇವೆ ಎಂದು ಹೇಳಿದರು.

ಪ್ರತಿಪಕ್ಷ ಕಾಂಗ್ರೆಸ್ ಮುಖಂಡರು ಹಿಜಾಬ್ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದು, ದ್ವೇಷವನ್ನು ಬಿತ್ತಲು ಯತ್ನಿಸುತ್ತಿದ್ದಾರೆ. ರಾಷ್ಟ್ರದಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವೇ ಇಲ್ಲ ಎಂದು ಹಂಗಿಸುತ್ತಿದ್ದರು. ಆದರೆ, ಇಂದು ಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ಅದೇ ರೀತಿಯಲ್ಲಿ ಇಂದಲ್ಲ ನಾಳೆ ದಿಲ್ಲಿ ಕೆಂಪು ಕೋಟೆಯ ಮೇಲೆಯೂ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News