×
Ad

ಕಾಂಗ್ರೆಸ್ ನಾಯಕರ ಹೇಳಿಕೆಯಿಂದ ಪರಿಸ್ಥಿತಿ ಬಿಗಡಾಯಿಸಿದೆ: ಶಿಕ್ಷಣ ಸಚಿವ ನಾಗೇಶ್

Update: 2022-02-09 23:16 IST

ಬೆಂಗಳೂರು, ಫೆ. 9: ‘ಕಾಂಗ್ರೆಸ್ ಪಕ್ಷದ ಕೆಲ ನಾಯಕರ ಪ್ರಚೋದನೆ ಮಾಡಿದ ಬಳಿಕ ಸಮವಸ್ತ್ರ ಪರಿಸ್ಥಿತಿ ಬಿಗಡಾಯಿಸಿದೆ. ಆರಂಭದಲ್ಲಿ ಯಾವುದೇ ರಾಜಕೀಯ ಪಕ್ಷ ಇದರಲ್ಲಿ ಇರಲಿಲ್ಲ. ನಂತರ ಕೆಲವು ರಾಜಕೀಯಪಕ್ಷಗಳು ನುಸುಳಿ ಇದನ್ನು ಈ ಹಂತಕ್ಕೆ ತಂದಿವೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ದೂರಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಹೈಕೋರ್ಟ್ ತೀರ್ಪಿನ ಬಳಿಕ ರಾಜ್ಯ ಸರಕಾರ ಮುಂದೆ ಏನು ಮಾಡಬೇಕೆಂದು ನಿರ್ಧರಿಸಲಿದೆ. ಅಲ್ಲಿಯ ವರೆಗೆ ಹಿಂದಿನ ನಿಯಮಾವಳಿ ಅನ್ವಯ ಶಾಲೆ ನಡೆಲಿದೆ. ಮಕ್ಕಳು ಸರಕಾರ ನಿಯಮಗಳನ್ನು ಪಾಲಿಸಿ ಶಾಲೆಗೆ ಬರಬೇಕು ಎಂದರು.

ಹೈಕೋರ್ಟ್ ತೀರ್ಪಿನ ನಿರೀಕ್ಷೆ ಇತ್ತು. ಆದರೆ, ಇದೀಗ ಅರ್ಜಿ ಹೈಕೋರ್ಟಿನ ವಿಸ್ತೃತ ಪೀಠಕ್ಕೆ ವರ್ಗಾವಣೆ ಆಗಿದೆ. ಯಾವುದೇ ಮಧ್ಯಂತರ ಆದೇಶವೂ ಆಗಿಲ್ಲ. ಸರಕಾರದ ಸುತ್ತೋಲೆ ಈಗಲೂ ಚಾಲ್ತಿಯಲ್ಲಿದೆ. ಶಾಲೆಗೆ ಮಕ್ಕಳು ಬರುವ ಸಂದರ್ಭದಲ್ಲಿ ಮಕ್ಕಳು ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಬೇಕು. ಎಪ್ರಿಲ್‍ನಲ್ಲಿ ಪರೀಕ್ಷೆಗಳನ್ನು ಆರಂಭವಾಗಲಿದೆ ಎಂದು ಹೇಳಿದರು.

ರಜೆ ಮುಂದುವರಿಸುವ ಕುರಿತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಮಾಡಲಾಗುವುದು. ಕೆಲ ಮಕ್ಕಳ ಸಣ್ಣ ವಿಷಯವನ್ನು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗಿ ಇಷ್ಡು ದೊಡ್ಡದು ಮಾಡಿದ್ದಾರೆ. ಕೆಲ ಮಕ್ಕಳು ಯಾರದ್ದೋ ಪ್ರಚೋದನೆಗೆ ಒಳಗಾಗಿ ಶಾಲೆ ಬಹಿಷ್ಕಾರದ ನಿರ್ಣಯ ಕೈಗೊಂಡಿದ್ದಾರೆ ಎಂದು ದೂರಿದರು.

ಕೆಲವರು ನಾಳೆ ಶುಕ್ರವಾರ ಪರೀಕ್ಷೆ ಮಾಡಬೇಡಿ ಎನ್ನುತ್ತಾರೆ. ಖುರಾನ್ ಗ್ರಂಥದ ಅನ್ವಯ ಕೆಲ ಪಠ್ಯ ಇರಬೇಕು ಎಂದರೆ ಏನು ಮಾಡಬೇಕು. ಹಾಗೆಲ್ಲ ಮಾಡಲು ಸಾಧ್ಯವೇ? ಸರಕಾರ ಇರುವುದು ಸಂವಿಧಾನಅನ್ವಯ ಆಡಳಿತ ನಡೆಸಲು. ಹೈಕೋರ್ಟ್ ತೀರ್ಪಿನ ಬಳಿಕ ಮುಂದಿ ತೀರ್ಮಾನ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News