ಹಿಜಾಬ್- ಕೇಸರಿ ಶಾಲು ಪ್ರತಿಭಟನೆ ವೇಳೆ ಉಪನ್ಯಾಸಕನ ಮೇಲೆ ಹಲ್ಲೆ: ಇಬ್ಬರ ಬಂಧನ
ಬಾಗಲಕೋಟೆ: ಹಿಜಾಬ್- ಕೇಸರಿ ಶಾಲು ಪ್ರತಿಭಟನೆ ವೇಳೆ ಮಂಗಳವಾರ ಅತಿಥಿ ಉಪನ್ಯಾಸಕರೊಬ್ಬರ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
"ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇತರ ಮೂವರನ್ನು ಶೀಘ್ರವೇ ಬಂಧಿಸಲಾಗುವುದು. ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಸಿದ ಕೃತ್ಯದಲ್ಲಿ ತೊಡಗಿದ್ದ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ" ಎಂದು ಎಸ್ಪಿ ಲೋಕೇಶ್ ಜಾಗಲಸಾರ್ ಹೇಳಿದ್ದಾರೆ.
ಈ ಪ್ರತಿಭಟನೆಗೆ ಪೊಲೀಸರ ಅನುಮತಿ ಪಡೆದಿರಲಿಲ್ಲ. ವಿದ್ಯಾರ್ಥಿಗಳ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾದರೆ ಅಂಥ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡಿಕೊಳ್ಳಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಏತನ್ಮಧ್ಯೆ ಹಿಂದುತ್ವ ಸಂಘಟನೆಗಳು ವೈಭವ ಥಿಯೇಟರ್ ಅಥವಾ ಈಶ್ವರಲಿಂಗ ಮೈದಾನದಿಂದ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದರು. ಅಕ್ಕಪಕ್ಕದ ಸ್ಥಳಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಕಾರ್ಯಕರ್ತರನ್ನು ಸಂಘಟನೆಗಳ ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳು ಮನವೊಲಿಸಿ ಪೊಲೀಸ್ ಠಾಣೆಯಿಂದ ತಹಸೀಲ್ದಾರ್ ಕಚೇರಿವರೆಗೆ ಮಾತ್ರ ಮೆರವಣಿಗೆ ನಡೆಸಲು ಅವಕಾಶ ಮಾಡಿಕೊಟ್ಟರು.
ತಹಸೀಲ್ದಾರ್ ಸಂಜಯ್ ಇಂಗಳೆ ಅವರಿಗೆ ಮನವಿಪತ್ರ ಸಲ್ಲಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಈಶ್ವರಲಿಂಗ ಮೈದಾನದಲ್ಲಿ ಸಭೆ ನಡೆಸಿದರು. ಹಿಜಾಬ್-ಕೇಸರಿ ಶಾಲು ವಿವಾದವನ್ನು ಖಂಡಿಸಿ ಸ್ವಯಂಪ್ರೇರಿತ ಬಂದ್ ನಡೆಸಲಾಯಿತು.