ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದು ಮುಗ್ಧ ವಿದ್ಯಾರ್ಥಿಗಳು ಎಂದ ಶಾಸಕ ಎಂ.ಪಿ ರೇಣುಕಾಚಾರ್ಯ
ಬೆಂಗಳೂರು: 'ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದರು ಎಂದು ಕಾಂಗ್ರೆಸ್ ಹಸಿ ಸುಳ್ಳು ಹೇಳಿದೆ. ಸಾಂದರ್ಭಿಕವಾಗಿ ಮುಗ್ಧ ಮನಸ್ಸಿನ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ್ದಾರೆ' ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶ ಪ್ರೇಮದಿಂದ ಕೇಸರಿ ಧ್ವಜ ಹಾರಿಸಿರಬಹುದು. ಮಕ್ಕಳಿಗೆ ಅರ್ಥ ಆಗಿಲ್ಲ, ಗೊತ್ತಾಗಿಲ್ಲ. ಖಾಲಿ ಕಂಬಕ್ಕೆ ಕೇಸರಿ ಧ್ವಜ ಹಾರಿಸಿದ್ದಾರೆ ಅದು ತಪ್ಪು ಎಂದು ನಾನು ಹೇಳಲು ಆಗಲ್ಲ. ರಾಷ್ಟ್ರ ಧ್ವಜದ ಗೌರವವನ್ನು ವಿದ್ಯಾರ್ಥಿಗಳು ಕಡಿಮೆ ಮಾಡಿಲ್ಲ ಎಂದು ಅವರು ವಿವರಣೆ ನೀಡಿದರು ಎಂದು ಹೇಳಿದರು.
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೊಡ್ಡವರು. ಭ್ರಷ್ಟಾಚಾರ ಮಾಡಿ ತಿಹಾರ್ ಜೈಲಿಗೆ ಹೋದ ಬಂದ ವ್ಯಕ್ತಿ. ದೊಡ್ಡ ಬಂಡೆಗಳನ್ನು ಒಡೆದು ಲೂಟಿ ಮಾಡಿದವರು. ನೇರವಾಗಿ ರಾಜಕಾರಣದ ಬಗ್ಗೆ ಮಾತನಾಡಬೇಕು. ಆದರೆ, ವೈಯಕ್ತಿಕ ಟೀಕೆ ಮಾಡಬಾರದು. ಡಿಕೆಶಿ ಇನ್ನು ಮುಂದಾದರೂ ಗೌರವದಿಂದ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.
ಕನಕಪುರದ ಬಂಡೆಗಳನ್ನ ಲೂಟಿ ಮಾಡಿ ಸಾಗಿಸಿದ್ದಾರೆ. ಇಂತಹ ದೊಡ್ಡವರ ಬಗ್ಗೆ ಮಾತನ್ನಾಡುವುದಿಲ್ಲ. ನಾನು ಅವರಷ್ಟು ದೊಡ್ಡವನಲ್ಲ. ನಾನು ವೈಯಕ್ತಿಕವಾಗಿ ಮಾತನಾಡುವುದಿಲ್ಲ. ರಾಜಕೀಯವಾಗಿ ಟೀಕೆ ಮಾಡಿದರೆ ಎದುರಿಸುತ್ತೇನೆ. ವೈಯಕ್ತಿಕ ವಿಚಾರಗಳನ್ನು ತಂದು ಟೀಕಿಸುವುದು ಏಕೆ? ನಾನು ಹಳ್ಳಿ ಹೈದ. ನನಗೂ ಮಾತನಾಡಲು ಬರುತ್ತದೆ ಎಂದು ರೇಣುಕಾಚಾರ್ಯ ತಿಳಿಸಿದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಹಗಲುಗನಸು ಕಾಣುತ್ತಿದ್ದಾರೆ. ಅದು ಕನಸಿನ ಮಾತು. ಸಿದ್ದರಾಮಯ್ಯ ಹಾಗೂ ಅವರ ನಡುವೆ ಗುದ್ದಾಟ ನಡೆಯುತ್ತಿದೆ. ನನ್ನ ಬಗ್ಗೆ ಶಿವಕುಮಾರ್‍ಗೆ ಮಾತಾಡುವ ನೈತಿಕತೆ ಇಲ್ಲ. ಮಾತಾಡಿದರೆ ಅದಕ್ಕೆ ಏನು ಮಾತಾಡಬೇಕು ಎಂದು ನನಗೆ ಚೆನ್ನಾಗಿ ಗೊತ್ತಿದೆ. ವೈಯಕ್ತಿಕ ಟೀಕೆ ಮಾಡಿದರೆ ನಾನು ನನ್ನದೇ ಭಾಷೆಯಲ್ಲಿ ಉತ್ತರ ನೀಡುತ್ತೇನೆ ಎಂದು ರೇಣುಕಾಚಾರ್ಯ ಟೀಕಿಸಿದರು.