×
Ad

ಗುತ್ತಿಗೆಯಲ್ಲಿನ ಶೇ.40% ಕಮೀಷನ್ ಕುರಿತ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆ ನಡಸಿ: ಡಿ.ಕೆಂಪಣ್ಣ ಒತ್ತಾಯ

Update: 2022-02-10 20:40 IST

ಮೈಸೂರು,ಫೆ.10: ರಾಜ್ಯದ ವಿವಿಧ ಇಲಾಖೆಗಳಲ್ಳಿ ನೀಡುವ ಗುತ್ತಿಗೆಯಲ್ಲಿ ಸಾಕಷ್ಟು ಭ್ರಷ್ಟಚಾರ ನಡೆಯುತ್ತಿದ್ದು, ಇದರ ಬಗ್ಗೆ ನಿವೃತ್ತ ನ್ಯಾಯಾಧೀಶ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು, ಭ್ರಷ್ಟಾಚಾರ ನಿಗ್ರಹ ಮತ್ತು ಪ್ಯಾಕೇಜ್ ಪದ್ಧತಿ ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಚಳವಳಿ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆಂಪಣ್ಣ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರಗಳು ಬದಲಾದಂತೆ ಹೊಸ ಸಚಿವರು ಜವಾಬ್ದಾರಿ ವಹಿಸಿಕೊಂಡಂತೆ ಭ್ರಷ್ಟಾಚಾರ ಕಡಿಮೆಯಾಗಬೇಕು ಆದರೆ ಪ್ರತಿ ಹೊಸ ಸರ್ಕಾರ ರಚನೆಯಾದಂತೆ ಭ್ರಷ್ಟಾಚಾರವೂ ಹೆಚ್ಚುತ್ತಿದೆ. ಇದರಿಂದ ಕಾಮಗಾರಿಗಳ ಗುಣಮಟ್ಟ ಕುಸಿಯುತ್ತಿದೆ ಮತ್ತು ಗುತ್ತಿಗೆದಾರರು ಸಂಕಷ್ಟಕ್ಕೀಡಾಗಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2019ರಿಂದೀಚೆಗೆ ಗುತ್ತಿಗೆಯಲ್ಲಿ ಸಾಕಷ್ಟು ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತಿದ್ದು, ಇದನ್ನು ನಿಯಂತ್ರಣ ಮಾಡದಿದ್ದರೆ ಗುತ್ತಿಗೆದಾರರಿಗೆ ಉಳಿಗಾಲವಿಲ್ಲ. ಹಾಗಂತ ಹಿಂದಿನ ಸರ್ಕಾರಗಳು ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳುವುದಿಲ್ಲ, 2019 ರಿಂದ ಹಿಂದೆ ಜನಪ್ರತಿನಿಧಿಗಳು  5% ಅಥವಾ 10% ಕಮೀಷನ್ ಪಡೆಯುತ್ತಿದ್ದರು. ಆದರೆ ಇದೀಗ 40% ಕಮೀಷನ್ ಪಡೆಯುತ್ತಿದ್ದಾರೆ. ಇವರಿಗೆ 40% ಕಮೀಷನ್ ನೀಡಿ, 15% ಟ್ಯಾಕ್ಸ್ ಕಟ್ಟಿ ನಾವುಗಳು ಕಾಮಗಾರಿ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ಈ ಸಂಬಂಧ ನಾವು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ಆದರೂ ಯಾವುದೇ ಕ್ರಮ ಜರುಗಿಸಿಲ್ಲ, ರಾಜ್ಯದಲ್ಲಿ ಒಂದು ಲಕ್ಷ ಗುತ್ತಿಗೆದಾರರಿದ್ದು, ಅವರೆಲ್ಲರೂ ಸೇರಿ ಇಂದಿನಿಂದ ಮುಖ್ಯಮಂತ್ರಿಗಳಿಗೆ ಪತ್ರಚಳವಳಿ ಆರಂಭಿಸಿದ್ದೇವೆ. ಇದಕ್ಕೂ ಬಗ್ಗದಿದ್ದರೆ ಮಾರ್ಚ್ ಮೂರು ಅಥವಾ ನಾಲ್ಕನೇ ವಾರದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಪ್ಯಾಕೇಜ್ ನೆಪದಲ್ಲಿ ರಾಜ್ಯದ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯದಲ್ಲಿ 17 ಸಾವಿರ ಪ್ರಥಮ ದರ್ಜೆ ಗುತ್ತಿಗೆದಾರರಿದ್ದಾರೆ. ಹೊರ ರಾಜ್ಯದ 296 ಮಂದಿ ಇಲ್ಲಿ ಗುತ್ತಿಗೆದಾರರಾಗಿ ನೊಂದಾಯಿಸಿಕೊಂಡಿದ್ದಾರೆ. ಪ್ಯಾಕೇಜ್ ರೂಪದಲ್ಲಿ ನೀಡುವ ಶೇ.90 ರಷ್ಟು ಗುತ್ತಿಗೆಯನ್ನು ಹೊರರಾಜ್ಯದ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಇನ್ನುಳಿದ ಶೇ.10 ರಷ್ಟು ಕಾಮಗಾರಿಯನ್ನು ಮಾತ್ರ ಕರ್ನಾಟಕದವರಿಗೆ ನೀಡಲಾಗುತ್ತಿದೆ ಎಂದು ಕಿಡಿಕಾರಿದರು.

ಭ್ರಷ್ಟಾಚಾರಕ್ಕೆ ದಾಖಲೆಗಳು ಇರುವುದಿಲ್ಲ ನಿಜ. ಆಗೆಂದು ಭ್ರಷ್ಟಾಚಾರವೇ ನಡೆದಿಲ್ಲ ಎಂದು ಪ್ರತಿಪಾದಿಸುವುದು ಸರಿ ಅಲ್ಲ, ಈ ಅಂಶವನ್ನೇ ಮುಮದಿಟ್ಟುಕೊಂಡು ಎಲ್ಲ ಜನಪ್ರತಿನಿಧಿಗಳು ದಾಖಲೆಗಳನ್ನು ಕೇಳುವುದು ವಾಡಿಕೆಯಾಗಿದೆ. ಇಂತಹ ಧೋರಣೆಯನ್ನು ಕೈಬಿಟ್ಟು ಜನಪ್ರತಿನಿಧಿಗಳು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪಕ್ಷಭೇದ ಮರೆತು ಪ್ರಯತ್ನ ಮಾಡಬೇಕು, ಆಗ ಮಾತ್ರ ಕಾಮಗಾಗಿಗಳಲ್ಲಿ ಗುಣಮಟ್ಟವನ್ನು ಕಾಣಲು ಸಾಧ್ಯ ಎಂದು ಹೇಳಿದರು.

ಗುತ್ತಿಗೆದಾರರ ಬೆನ್ನಿಗಂಟಿದ ಭ್ರಷ್ಟಾಚಾರದ ಭೂತವನ್ನು ತೊಡೆದು ಹಾಕಬೇಕಾಗಿದ್ದು, ಇದಕ್ಕಾಗಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ, ಪ್ಯಾಕೇಜ್ ಪದ್ದತಿಯನ್ನು ಕೂಡಲೇ ರದ್ದುಗೊಳಿಸಲಿ, ಗುತ್ತಿಗೆದಾರರಿಗೆ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಬಿಬಿಎಂಪಿಯಿಂದ ಸುಮಾರು 22,000 ಕೋಟಿ ರೂ. ಗಳಿಗೂ ಹೆಚ್ಚು ಹಣ ಬಿಡುಗಡೆಯಾಗಬೇಕಿದೆ. ಕೂಡಲೇ ಈ ಬೃಹತ್ ಬಾಕಿ ಮೊತ್ತವನ್ನು ಆದ್ಯತೆ ಮತ್ತು ಹಿರಿತನದ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ, ಆರ್.ಮಂಜುನಾಥ್, ಆರ್.ಅಂಬಿಕಾಪತಿ, ಬಿ.ಸಿ.ದಿನೇಶ್,  ಸಿ.ಡಿ.ಕೃಷ್ಣ, ರುದ್ರಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News