×
Ad

ಮುಂದಿನ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುವುದಿಲ್ಲ ಎಂದ ಎಚ್ ಡಿಕೆ

Update: 2022-02-10 23:11 IST

ಮೈಸೂರು,ಫೆ.10: ಕುಟುಂಬ ರಾಜಕಾರಣದ ಹೆಸರಿನಲ್ಲಿ ನಮ್ಮ ಮೇಲೆ ಅಪಪ್ರಚಾರ ನಡೆಯುತ್ತಿದೆ. ಇದರಿಂದ ದೂರವಾಗಲು ನಾವು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿಯೇ ಮುಂದಿನ ಬಾರಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುವುದಿಲ್ಲ  ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಅನಿತಾ ಕುಮಾರಸ್ವಾಮಿ ಅವರು ಶಾಸಕರಾಗಿದ್ದಾರೆ. ಇನ್ನೂ ಹದಿನಾಲ್ಕು ತಿಂಗಳು ಅವರ ಅಧಿಕಾರವಧಿ ಇರುವುದರಿಂದ ಅಧಿಕಾರಿಗಳು ಚುನಾವಣೆಗೆ ನಿಲ್ಲುವುದಿಲ್ಲ ಎಂದರೆ ಸರಿಯಾಗಿ ಕೆಲಸ ಮಾಡುವುದಿಲ್ಲ, ಹಾಗಾಗಿ ಪದೇ ಪದೇ ಈ ವಿಚಾರ ಚರ್ಚೆ ಬೇಡ ಎಂದು ಅವರು ನನ್ನ ಬಳಿ ಹೇಳಿದ್ದಾರೆ. ಹಾಗಾಗಿ ಈ ಬಗ್ಗೆ ಅಂತಿಮ ತೀರ್ಮಾನ ಚುನಾವಣೆ ಘೋಷಣೆ ನಂತರ ಮಾಡುತ್ತೇವೆ ಎಂದರು.

ನಿಖಿಲ್ ಕುಮಾರಸ್ವಾಮಿಯನ್ನು ರಾಜಕಾರಣಕ್ಕೆ ತರುವುದಕ್ಕೆ ನನಗೆ ಇಷ್ಟವಿರಲಿಲ್ಲ. ಮುಖಂಡರ ಒತ್ತಡದ ಮೇರೆಗೆ ಅವರನ್ನು ರಾಜಕಾರಣಕ್ಕೆ ತಂದೆ. ಕುಟುಂಬ ರಾಜಕಾರಣದ ವಿಚಾರದಲ್ಲಿ ನಾನು ಈಗ ಕೇವಲ ನನ್ನ ಕುಟುಂಬದ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಾನು ನಮ್ಮ ಸಹೋದರರು ಬೇರೆಯಾಗಿದ್ದೇವೆ. ಹಾಗಾಗಿ ನಾನು, ನನ್ನ ಪತ್ನಿ, ನನ್ನ ಮಗನ ಬಗ್ಗೆ ಮಾತ್ರ ಪ್ರಸ್ತಾಪ ಮಾಡುತ್ತಿದ್ದೇನೆ. ಒಟ್ಟಾರೆ ಎಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಹಿಜಾಬ್-ಕೇಸರಿ ಶಾಲು ವಿವಾದ ದೊಡ್ಡದಾಗಬೇಕು ಎಂಬುದು ಸರ್ಕಾರದ ಇಚ್ಚೆ. ಕಿಡಿಯಂತಿದ್ದ ವಿವಾದ ಬೆಂಕಿಯಾಗಿ ರಾಜ್ಯಾದ್ಯಂತ ಹಬ್ಬಲು ಸರ್ಕಾರವೇ ಕಾರಣ. ಸರ್ಕಾರ ತನ್ನ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಈ ವಿಚಾರವನ್ನು ದೊಡ್ಡದು ಮಾಡುತ್ತಿದೆ. ಕಾಂಗ್ರೆಸ್ ಮುಸ್ಲಿಂರನ್ನು ಎತ್ತಿಕಟ್ಟಿ ರಾಜಕಾರಣ ಮಾಡುತ್ತಿದೆ. ಬಿಜೆಪಿಯ ಅಂಗ ಸಂಸ್ಥೆಗಳು ಹಿಂದೂಗಳನ್ನು ಎತ್ತಕಟ್ಟಿ ರಾಜಕಾರಣ ಮಾಡುತ್ತಿದ್ದಾರೆ. ಈ ಎರಡೂ ಪಕ್ಷಗಳ ಉದ್ದೇಶಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಈಗ ಗಲಾಟೆ ಮಾಡಿದ ವಿದ್ಯಾರ್ಥಿಗಳ ಮೇಲೆ ಮುಂದೆ ಕೇಸ್ ಬೀಳುವುದು ನಿಶ್ಚಿತ. ಈಗ ಬಂಧನವಾಗಿರುವ ವಿದ್ಯಾರ್ಥಿಗಳಲ್ಲಿ ಯಾರು ಬಿಜೆಪಿ, ಕಾಂಗ್ರೆಸ್ ಮುಖಂಡರ ಮಕ್ಳಳಿಲ್ಲ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News