×
Ad

ಹಿಜಾಬ್ ಪ್ರಕರಣದಿಂದ ಕಾಂಗ್ರೆಸಿಗರ ನಿಜ ಬಣ್ಣ ಬಯಲು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2022-02-11 19:41 IST

ಬೆಂಗಳೂರು, ಫೆ. 11: ‘ಹಿಜಾಬ್(ಸ್ಕಾರ್ಫ್) ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದು ಆ ಮೂಲಕ ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲಾಗಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿನ ಶಕ್ತಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಕೃತ್ಯದ ಹಿಂದೆ ಯಾರಿದ್ದಾರೆಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷರು ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ. ಸದ್ಯಕ್ಕೆ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಯಾವಾಗ ನಾವು ಮಧ್ಯಪ್ರವೇಶ ಆಗಬೇಕು ಎಂಬುದು ನಮಗೆ ಗೊತ್ತಿದೆ' ಎಂದು ಹೇಳಿದರು.

‘ಇಷ್ಟು ದಿನ ನಾವು ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಹೇಳುತ್ತಿದ್ದರು. ಇದೀಗ ಯಾರು ಮಧ್ಯಪ್ರವೇಶ ಮಾಡುತ್ತಿದ್ದಾರೆಂಬುದು ಜನರಿಗೆ ಗೊತ್ತಾಗಿದೆ ಎಂದು ದೂರಿದ ಅವರು, ಅನೇಕ ರಾಷ್ಟ್ರಗಳಲ್ಲಿ ಹಿಜಾಬ್ ನಿಷೇಧ ಮಾಡಲಾಗಿದೆ. ಆಗ ಯಾರೂ ಪ್ರಶ್ನೆ ಮಾಡಲಿಲ್ಲ. ಪಾಕಿಸ್ತಾನದಿಂದಲೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿರಲಿಲ್ಲ. ಈಗ ಏಕೆ ಬಂದಿದೆ? ಎಂದು ಪ್ರಶ್ನಿಸಿದರು.

ನೆರೆಯ ಕೇರಳ ರಾಜ್ಯದಲ್ಲೂ ಹಿಜಾಬ್ ಬಗ್ಗೆ ಹೈಕೋರ್ಟ್ ಆದೇಶ ನೀಡಿತ್ತು. ಆಗ ಈ ವಿಷಯ ಅಂತರ್‍ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ವರದಿ ಮಾಡಿರಲಿಲ್ಲ. 2015ರಲ್ಲಿ ಮುಂಬೈ ಹೈಕೋರ್ಟ್ ಆದೇಶ ನೀಡದ ಸಂದರ್ಭದಲ್ಲಿಯೂ ಹೀಗೆ ಚರ್ಚೆ ಆಗಿಲ್ಲ. ಇದೀಗ ಏಕೆ ಸುದ್ದಿ ಆಗುತ್ತಿದೆ? ಎಂದು ನಾಗೇಶ್ ಕೇಳಿದರು.

ರಾಜ್ಯದಲ್ಲಿ ನಮ್ಮ ಸರಕಾರ ಹಿಜಾಬ್ ಅಥವಾ ಬುರ್ಖಾವನ್ನು ನಿಷೇಧಿಸಿಲ್ಲ. ಕೇವಲ ಶಾಲೆಯೊಳಗೆ ಸಮವಸ್ತ್ರ ಧರಿಸಬೇಕು ಎಂದು ಮಾತ್ರ ಹೇಳಿದ್ದೇವೆ. ಹೀಗಾಗಿ, ಇದರ ಹಿಂದೆ ವಿದೇಶಿಗರ ಕೈವಾಡದ ಸಂಶಯವಿದೆ ಎಂದು ಅನುಮಾನ ವ್ಯಕ್ತಪಡಿಸಿದ ಅವರು, ಮೊದಲಿಗೆ ಕನ್ನಡ ಮಾಧ್ಯಮದಲ್ಲಿ ಎಲ್ಲೂ ಈ ವಿವಾದ ಸುದ್ದಿ ಆಗಿರಲಿಲ್ಲ. ದಿಲ್ಲಿ ಮೂಲದ ಕೆಲ ಮಾಧ್ಯಮಗಳಲ್ಲಿ ಹಾಗೂ ಅಂತರ್‍ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಈ ವಿಚಾರವನ್ನು ಯಾವುದೇ ಕಾರಣಕ್ಕೆ ರಾಜಕೀಯ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂರು ದಿನಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿತ್ತು. ನಿನ್ನೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯರು ಶಾಲೆಗಳನ್ನು ಆರಂಭಿಸಲು ಸೂಚಿಸಿದ್ದು, ಸರಕಾರದ ಆದೇಶದಂತೆ ಸಮವಸ್ತ್ರ ನಿಯಮಕ್ಕೆ ಸೂಚಿಸಿದ್ದಾರೆ. 

ಹೀಗಾಗಿ ಯಾರೂ ಹಿಜಾಬ್(ಸ್ಕಾರ್ಫ್) ಅಥವಾ ಕೇಸರಿ ಶಾಲು ಹಾಕಿ ಶಾಲೆಗಳಿಗೆ ಬರದಂತೆ ಸೂಚಿಸಲಾಗಿದೆ. ಸೋಮವಾರದಿಂದ ಶಾಲೆಗಳು ಆರಂಭವಾಗಲಿವೆ. ಫೆ.14ರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿದೆ. ಆ ಸಭೆಯಲ್ಲಿ ಕಾಲೇಜುಗಳನ್ನು ತಕ್ಷಣದಿಂದ ಆರಂಭಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News