×
Ad

45ಲಕ್ಷ ಮನೆಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ಲಿ ನೀರಿನ ಸಂಪರ್ಕ: ಸಚಿವ ಕೆ.ಎಸ್.ಈಶ್ವರಪ್ಪ

Update: 2022-02-12 00:00 IST

ಬೆಂಗಳೂರು, ಫೆ. 11: ‘ಜಲಜೀವನ್ ಮಿಷನ್(ಜೆಜೆಎಮ್) ಯೋಜನೆಯಡಿಯಲ್ಲಿ ಈವರೆಗೆ ರಾಜ್ಯದ 45.44 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಸಂಪರ್ಕ ಕಲ್ಪಿಸಲಾಗಿದೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್‍ಈಶ್ವರಪ್ಪ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾದ ಮನೆ ಮನೆಗೂ ಗಂಗೆ-ಜಲಜೀವನ ಮಿಷನ್ ಕರ್ನಾಟಕದಲ್ಲಿ ಅತಿ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಫೆ.9ರಂದು ನಡೆದ ಸಂಪುಟ ಸಭೆಯಲ್ಲಿ ಒಂದೇ ಬಾರಿಗೆ 16 ಯೋಜನೆಗಳಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ' ಎಂದರು.

‘ಇದರಿಂದ 6,357 ಹಳ್ಳಿಗಳ 6,17,607 ಮನೆಗಳಿಗೆ ನಲ್ಲಿ ಮೂಲಕ ನೀರಿನ ಪೂರೈಕೆ ಮಾಡಲು ಸಾಧ್ಯವಾಗಲಿದ್ದು, ಈವರೆಗೆ ಒಟ್ಟು 45.44ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಕೇವಲ 2020-21ರಲ್ಲಿ 3.43ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ದೊರೆತಿದೆ. 2021-22ರಲ್ಲಿ 25.17 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ನೀಡುವ ಗುರಿಯನ್ನು ಹೊಂದಲಾಗಿದ್ದು, 17.60 ಲಕ್ಷ ಕುಟುಂಬಗಳಿಗೆ ಮನೆಯಲ್ಲಿ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ' ಎಂದು ವಿವರ ನೀಡಿದರು.

‘2022-23ರಲ್ಲಿ 27.14 ಲಕ್ಷ ಮನೆಗಳಿಗೆ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, 2023-24ರಲ್ಲಿ 17.60 ಲಕ್ಷ ಕುಟುಂಬಗಳ ಮನೆಗಳಿಗೆ ನೀರು ಪೂರೈಕೆ ಸಂಪರ್ಕ ಕಲ್ಪಿಸಲಾಗಿದೆ. ರಾಜ್ಯದಲ್ಲಿ 97.91 ಲಕ್ಷ ಗ್ರಾಮೀಣ ಮನೆಗಳಿಗೆ ನೀರು ಸಂಪರ್ಕ ಒದಗಿಸಲಾಗುವುದು. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. 

ಉದ್ಯೋಗ ಖಾತ್ರಿಯಲ್ಲೂ ಸಾಧನೆ: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 32.41 ಲಕ್ಷ ಕುಟುಂಬಗಳ 60.87 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. 30.05 ಲಕ್ಷ ಮಹಿಳೆಯರು, 5.80 ಲಕ್ಷ ಹಿರಿಯ ನಾಗರಿಕರಿಗೆ ಮತ್ತು 22,400 ಲಕ್ಷಕ್ಕೂ ಹೆಚ್ಚು ವಿಶೇಷ ಚೇತನರು ಸೇರಿ ಒಟ್ಟು 4,064 ಕೋಟಿ ರೂ.ಕೂಲಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು. 

ಈ ವರ್ಷ ದಾಖಲೆಯ 13.61 ಲಕ್ಷ ಕಾಮಗಾರಿ ತೆಗೆದುಕೊಂಡು ಈಗಾಗಲೇ 4.31 ಲಕ್ಷ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 13 ಕೋಟಿ ಮಾನವ ದಿನಗಳಷ್ಟು ಉದ್ಯೋಗ ಸೃಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿತ್ತು. 2021ರ ಡಿಸೆಂಬರ್ ತಿಂಗಳಲ್ಲೇ ಈ ಗುರಿಯನ್ನು ಸಾಧಿಸಲಾಗಿತ್ತು ಎಂದು ಈಶ್ವರಪ್ಪ ಮಾಹಿತಿ ನೀಡಿದರು.

ಹೆಚ್ಚುವರಿಯಾಗಿ 1.40 ಕೋಟಿ ಮಾನವ ದಿನಗಳ ಸೃಜನೆಗೆ 715 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಈ ಗುರಿಯನ್ನೂ ಶೀಘ್ರದಲ್ಲಿ ಸಾಧಿಸಲಾಗುವುದು. ಉದ್ಯೋಗ ಖಾತರಿ ಯೋಜನೆಯಡಿ ಈ ವರ್ಷ 32.41 ಲಕ್ಷ ಕುಟುಂಬಗಳ 60.87 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. ಖಾತರಿ ಯೋಜನೆಯಡಿ 13.61 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 4.3 ಲಕ್ಷ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.

ಜಲ ಶಕ್ತಿ ಅಭಿಯಾನದ ಅಡಿಯಲ್ಲಿ 8.92 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 4.87 ಲಕ್ಷ ಕಾಮಗಾರಿಗಳು ಪೂರ್ಣಗೊಂಡಿವೆ. ಉದ್ಯೋಗ ಖಾತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುದಾನದಲ್ಲಿ ಆರು ವರ್ಷಗಳ ಅವಧಿಯಲ್ಲಿ 3,275 ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಈ ಪೈಕಿ 2,335 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಈಶ್ವರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News